ಟೋಕಿಯೋ: ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ (62) ಹಂತಕ ಟೆಟ್ಸುಯಾ ಯಮಗಾಮಿ ಪೊಲೀಸರ ಮುಂದೆ ಹತ್ಯೆಗೆ ಕಾರಣ ತಿಳಿಸಿದ್ದಾನೆ.
ನಿನ್ನೆ ಜಪಾನ್ ಸಂಸತ್‍ನ ಮೇಲ್ಮನೆಗೆ ಚುನಾವಣೆ ನಡೆಯುತ್ತಿದ್ದ ಪ್ರಚಾರದ ವೇಳೆ ಶಿಂಜೋ ಅಬೆ ಹಿಂದೆ 10 ಅಡಿ ದೂರದಲ್ಲಿ ನಿಂತಿದ್ದ ಟೆಟ್ಸುಯಾ ಯಮಗಾಮಿ 2 ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಹಂತಕನನ್ನು ಕೂಡಲೇ ಪೊಲೀಸರು ಬಂಧಿಸಿದ್ದರು. ಬಳಿಕ ತನಿಖೆಯಲ್ಲಿ ಆರೋಪಿ ನಾರಾ ಸಿಟಿಯ ನಿವಾಸಿಯಾಗಿದ್ದು ನೌಕಾಸೇನೆಯ ಮಾಜಿ ಅಧಿಕಾರಿಯಾಗಿದ್ದ. ಜಪಾನೀಸ್ ನೌಕಾಪಡೆಯಾಗಿರುವ ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF)ನಲ್ಲಿ 2005ರ ವರೆಗೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಯಮಗಾಮಿ ಕೆಲಸವಿಲ್ಲದೆ ಜೀವನ ಸಾಗಿಸುತ್ತಿದ್ದ. ಘಟನೆಗೆ ಮನೆಯಲ್ಲಿ ತಯಾರಿಸಿದ ದೇಸಿ ಗನ್ ಬಳಕೆ ಮಾಡಿ ಎರಡು ಸುತ್ತು ಗುಂಡು ಹಾರಿಸಿ ಶಿಂಜೋ ಅಬೆಯನ್ನು ಹತ್ಯೆ ಮಾಡಿದ್ದ. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು – ಆಸ್ಪತ್ರೆಯಲ್ಲಿ ನಿಧನ
ಹತ್ಯೆಯ ಬಳಿಕ ಯಮಗಾಮಿಯನ್ನು ನಾರಾದ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಕಾರಣ ತಿಳಿಸಿದ್ದಾನೆ. ಯಮಗಾಮಿ ಸೇನೆಯಲ್ಲಿ ಸೇವೆಸಲ್ಲಿಸಿದ ಬಳಿಕ ನಿರುದ್ಯೋಗಿಯಾಗಿದ್ದ. ಹಾಗಾಗಿ ನಿರುದ್ಯೋಗದಿಂದ ಬೇಸತ್ತು ಮತ್ತು ಶಿಂಜೋ ಅಬೆಯ ರಾಜಕೀಯ ನಡೆಯಿಂದ ಅಸಮಾಧಾನಗೊಂಡು ಹತ್ಯೆಗೆ ಮುಂದಾಗಿದ್ದ. ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ
https://twitter.com/Gretche55113699/status/1545314377812922369
ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ:
ಜಪಾನ್‍ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಯಾವುದೇ ವ್ಯಕ್ತಿ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಪರವಾನಗಿ ಕೂಡ ಜಪಾನ್‍ನಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಹಾಗಾಗಿ ಯಮಗಾಮಿ ತಾನೇ ಗನ್ ತಯಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಚ್ಚರಿ ಎಂದರೆ ಅಬೆ ಹತ್ಯೆಯ ಬಳಿಕ ಯಮಗಾಮಿ ಓಡಿ ಹೋಗಲೂ ಕೂಡ ಯತ್ನಿಸಿಲ್ಲ. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ಜಪಾನ್ ಇತಿಹಾಸದಲ್ಲೇ ಸುಮಾರು ನೂರು ವರ್ಷಗಳಲ್ಲಿ ಜಪಾನ್‍ನ ಹಾಲಿ ಅಥವಾ ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.