ಕೊಪ್ಪಳ: ಗೃಹಮಂತ್ರಿ ಜಿ.ಪರಮೇಶ್ವರ್ ನಾನು ಸಿಎಂ ಆಕ್ಷಾಂಕಿ ಎನ್ನುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಕೂಡ ನಾನೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಲಿಂಗಾಯತ ಕೋಟಾದಲ್ಲಿ ನಾನ್ಯಾಕೆ ಸಿಎಂ ಆಗಬಾರದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayreddy) ಹೇಳಿದ್ದಾರೆ.
ಕೊಪ್ಪಳದ ಯಲಬುರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಆಗಬೇಕು ಎಂಬುದರಲ್ಲಿ ತಪ್ಪೇನಿದೆ? ಗೃಹಮಂತ್ರಿ ಜಿ.ಪರಮೇಶ್ವರ್ ನಾನು ಸಿಎಂ ಆಕ್ಷಾಂಕಿ ಎನ್ನುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಕೂಡ ನಾನೇ ಮುಖ್ಯಮಂತ್ರಿ ಅಂತಾರೆ. ಅದಕ್ಕೆ ನಾನು ಧೈರ್ಯವಾಗಿ ನಾನೂ ಯಾಕೆ ಸಿಎಂ ಆಗಬಾರದು ಎನ್ನುತ್ತಿದ್ದೇನೆ. ಆದರೆ, ಈಗ ಸಿಎಂ ಹುದ್ದೆ ಖಾಲಿ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಶಾಂತಕುಮಾರ್ ನಾಮಪತ್ರ ತಿರಸ್ಕೃತ – ವೆಂಕಟೇಶ ಪ್ರಸಾದ್ KSCA ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಕಾಂಗ್ರೆಸ್‌ನಲ್ಲಿ ಸಾಕಷ್ಟು ಶಾಸಕರು ಸಿಎಂ ಆಗಲು ಅರ್ಹತೆ ಇರುವವರು ಇದ್ದಾರೆ. ಆದರೆ, ಸಿಎಂ ಖುರ್ಚಿ ಖಾಲಿ ಇಲ್ಲ. ನನ್ನ ಪ್ರಕಾರ ಸಿಎಂ ಹುದ್ದೆ ಎರಡೂವರೆ ವರ್ಷ, ಎರಡೂವರೆ ವರ್ಷಕ್ಕೆ ಹಂಚಿಕೆ ಎಂಬುದಕ್ಕೆ ಅರ್ಥ ಇಲ್ಲ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರುತ್ತಾರೆ ಎಂದಿದ್ದಾರೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ಬರುವ ವರ್ಷ ಬಜೆಟ್ ಬಗ್ಗೆ ಸಿದ್ಧತೆ ಮಾಡಲು ಸೂಚಿಸಿದ್ದಾರೆ. ಈ ಹಿಂದೆ ಶಾಸಕಾಂಗ ಸಭೆ ನಡೆದಾಗ ಅಧಿಕಾರ ಹಂಚಿಕೆ ಆಗಿರೋದನ್ನು ಯಾರೂ ಹೇಳಿಲ್ಲ. ನಾನೂ ವೋಟ್ ಹಾಕಿದ್ದೇನೆ. ನಮಗೆ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಹೇಳಿಲ್ಲ. ಆಗ ಹೈಕಮಾಂಡ್ ನಮಗೆ ಆಗ ಹೇಳಬೇಕಿತ್ತಲ್ವಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆ ಅಧಿಕಾರ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಒಮ್ಮೆ ಶಾಸಕರಿಂದ ಆಯ್ಕೆ ಆಗಿರುವ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಆದವರನ್ನು ಸಕಾರಣ ಇಲ್ಲದೇ ಅಧಿಕಾರದಿಂದ ಇಳಿಸಲು ಆಗಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಇರಬೇಕು. ಜನ ವಿರೋಧಿ ಕೆಲಸ ಮಾಡಿರಬೇಕು. ಆಗ ಮಾತ್ರ ಅಧಿಕಾರದಿಂದ ತೆಗೆಯಲು ಸಾಧ್ಯ. ಜೊತೆಗೆ ಡಿ.ಕೆ. ಶಿವಕುಮಾರ್ ಕೂಡಾ ಎಲ್ಲೂ ನಾನು ಸಿಎಂ ಆಗುತ್ತೇನೆ ಎಂದಿಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೀದರ್ ಸಾಂಸ್ಕೃತಿಕ ಉತ್ಸವ 2025 – ಗಾಯಕ ವಿಜಯಪ್ರಕಾಶ್, ನಿರೂಪಕಿ ಅನುಶ್ರೀ, ನಟಿ ಅಮೂಲ್ಯ ಭಾಗಿ

