ಚೆನ್ನೈ: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೇ12 ರಂದು ಸಿಎಸ್‍ಕೆ (Chennai Super Kings) ಹಾಗೂ ಆರ್‍ಆರ್ (Rajasthan Royals) ನಡುವೆ ನಡೆದ ಐಪಿಎಲ್ (IPL 2024) ಪಂದ್ಯದಲ್ಲಿ ಸಿಎಸ್‍ಕೆ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ (Ravindra Jadeja) ವಿಚಿತ್ರ ಕಾರಣಕ್ಕೆ ಔಟಾಗಿದ್ದಾರೆ. ಫಿಲ್ಡಿಂಗ್‍ಗೆ ಅಡ್ಡಿಪಡಿಸಿದ (Obstructing The Field) ಕಾರಣಕ್ಕೆ ಅವರನ್ನು ಔಟ್ ಎಂದು ಘೋಷಿಸಲಾಯಿತು.
ಪಂದ್ಯದ 16ನೇ ಓವರ್‍ನಲ್ಲಿ ರವೀಂದ್ರ ಜಡೇಜಾ ಬಾಲ್‍ನ್ನು ಬೌಂಡರಿಯತ್ತ ಬಾರಿಸಿ 2 ರನ್ ಓಡಲು ಮುಂದಾದರು. ಋತುರಾಜ್ ಗಾಯಕ್ವಾಡ್ 2ನೇ ರನ್ ಓಡಲು ನಿರಾಕರಿಸಿದರು. ಅಷ್ಟರಲ್ಲಾಗಲೇ ಅರ್ಧ ಪಿಚ್ ತಲುಪಿದ್ದ ಜಡೇಜಾ ನಾನ್ ಸ್ಟ್ರೈಕ್‍ನತ್ತ ತಿರುಗಿ ಓಡಿದರು. ಈ ವೇಳೆ ಫಿಲ್ಡರ್‌ನಿಂದ ಬಾಲ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈ ಸೇರಿತು. ತಕ್ಷಣವೇ ಸ್ಯಾಮ್ಸನ್ ನಾನ್ ಸ್ಟ್ರೈಕರ್ ಸ್ಟಂಪ್‍ನತ್ತ ಎಸೆದರು. ಈ ವೇಳೆ ಚೆಂಡನ್ನು ತಡೆಯಲೆಂದೇ ಜಡೇಜಾ ಸ್ಟಂಪ್‍ಗೆ ನೇರವಾಗಿ ಓಡಿದರು. ಚೆಂಡು ಜಡೇಜಾ ಅವರ ಕೈಗೆ ತಾಗಿತು.
Advertisement
Advertisement
ಈ ವೇಳೆ ಸಂಜು ಸ್ಯಾಮ್ಸನ್ ಸೇರಿದಂತೆ ರಾಜಸ್ಥಾನ್ ರಾಯಲ್ಸ್ ಫೀಲ್ಡರ್‍ಗಳು ರನೌಟ್‍ಗಾಗಿ ಅಂಪೈರ್‍ಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಫೀಲ್ಡ್ ಅಂಪೈರ್ ರಿಪ್ಲೇ ಪರಿಶೀಲಿಸುವಂತೆ ಟಿವಿ ಅಂಪೈರ್‍ಗೆ ಸೂಚಿಸಿದರು. ವಿಡಿಯೋ ಪರಿಶೀಲನೆ ವೇಳೆ ರವೀಂದ್ರ ಜಡೇಜಾ ಉದ್ದೇಶಪೂರ್ವಕವಾಗಿಯೇ ಚೆಂಡನ್ನು ತಡೆಯಲು ಯತ್ನಿಸಿದ್ದು ಕಂಡು ಬಂದಿತ್ತು. ಬಳಿಕ ಔಟ್ ಎಂದು ಘೋಷಿಸಲಾಗಿತ್ತು. ಇದೀಗ ರವೀಂದ್ರ ಜಡೇಜಾ ಔಟ್ ಆಗಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಟಾರ್ ಆಟಗಾರನ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಏನಿದು ಕ್ರಿಕೆಟ್ ರೂಲ್ಸ್ 37.1.4?
ಬ್ಯಾಟರ್‍ಗಳು ರನ್ ಗಳಿಸುವಾಗ ತನ್ನ ದಿಕ್ಕನ್ನು ಬದಲಿಸಿ ರನೌಟ್‍ಗೆ ಯತ್ನಿಸುವ ಫೀಲ್ಡರ್ ಪ್ರಯತ್ನವನ್ನು ಅಡ್ಡಿಪಡಿಸಬಾರದು. ಹೀಗಾದರೆ ಅದು ಕ್ರಿಕೆಟ್ ನಿಯಮದ ಪ್ರಕಾರ ತಪ್ಪು ಎಂದು ಪರಿಗಣಿಸಿ ಔಟ್ ಎಂದು ತೀರ್ಪು ನೀಡಲಗುತ್ತದೆ. ಅಂದರೆ ಎದುರಾಳಿ ಆಟಗಾರ ಫೀಲ್ಡರ್‌ಗಳ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಬಾರದು ಎಂಬುದು ಈ ನಿಯಮದ ಉದ್ದೇಶ.
ಜಯ ಸಾಧಿಸಿದ ಸಿಎಸ್‍ಕೆ: ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 142 ರನ್‍ಗಳನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕ್ವಾಡ್ (42) ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಈ ಮೂಲಕ 18.2 ಓವರ್‍ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ವಿಕೆಟ್‍ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಸಿಎಸ್‍ಕೆ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.