– ಪಹಲ್ಗಾಮ್ ನರಮೇಧ-ಸಿಂಧೂರ ಪ್ರತೀಕಾರ; ಈ ಬಾರಿ ಪಂದ್ಯ ರಣರೋಚಕ
2025ರ ಟಿ20 ಏಷ್ಯಾಕಪ್ ಟೂರ್ನಿ ಶುರುವಾಗಿದ್ದು, ಭಾರತ – ಪಾಕಿಸ್ತಾನ (Ind vs Pak) ನಡುವಿನ ರೋಚಕ ಕದನ ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಒಟ್ಟು 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿದೆ.
1984ರಲ್ಲಿ ಆರಂಭಗೊಂಡ ಏಷ್ಯಾಕಪ್ (Asia Cup 2025) ಟೂರ್ನಿ 16 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 17ನೇ ಆವೃತ್ತಿಗೆ ಕಾಲಿಟ್ಟಿದೆ. ಆದ್ರೆ ಪ್ರತಿ ಬಾರಿ ಏಷ್ಯಾಕಪ್ ಹಾಗೂ ವಿಶ್ವಕಪ್‌ನಂತಹ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಅತ್ಯಂತ ರೋಚಕ ಅನ್ನಿಸೋದೇ ಇಂಡೋ-ಪಾಕ್ ಕದನ. ಅದರಲ್ಲೂ ಪಹಲ್ಗಾಮ್ ನರಮೇಧ, ಆಪರೇಷನ್ ಸಿಂಧೂರ ಪ್ರತೀಕಾರದಂತಹ ದಾಳಿಯ ಬಳಿಕ ಭಾರತ ಪಾಕ್ ನಡುವೆ ನಡೆಯುತ್ತಿರುವ ಮೊದಲ ಪಂದ್ಯವಾಗಿದೆ.
ಪಂದ್ಯಕ್ಕೂ ಮುನ್ನವೇ ಏಕಿಷ್ಟು ತೀವ್ರತೆ?
2025ರ ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಘೋಷಣೆಯಾದಾಗಿನಿಂದಲೂ ಇಂಡೋ ಪಾಕ್ ಪಂದ್ಯವನ್ನ ರದ್ದುಗೊಳಿಸಬೇಕೆಂಬ ಕೂಗು ಕೇಳಿಬರುತ್ತಲೇ ಇದೆ. ಏಕೆಂದ್ರೆ ಪಾಕ್ ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ನರಮೇಧ, ಇದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯೇ ಮುಖ್ಯ ಕಾರಣ. ಭಾರತ ಪ್ರತೀಕಾರದ ದಾಳಿ ಬಳಿಕ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿವೆ. ಹಾಗಾಗಿ ಭಾರತದ ಶತ್ರುರಾಷ್ಟ್ರದ ವಿರುದ್ಧ ಪಂದ್ಯವನ್ನು ರದ್ದುಗೊಳಿಸಬೇಕೆಂಬ ಕೂಗು ಕೇಳಿಬಂದಿದೆ. ಹೀಗಾಗಿ ಉಭಯ ತಂಡಗಳ ನಡುವಿನ ಪಂದ್ಯ ಹಿಂದೆಂದಿಗಿಂತಲೂ ರೋಚಕವಾಗಿರಲಿದೆ. ಹಳೆಯ ಇತಿಹಾಸ ಕೆದಕುವ ಮುನ್ನ ಪೆಹಲ್ಗಾಮ್‌ನಲ್ಲಿ ಏನಾಯ್ತು? ಅದಕ್ಕೆ ಭಾರತ ಪ್ರತೀಕಾರದ ರೀತಿ ಹೇಗಿತ್ತು ಎಂಬುದನ್ನು ಮೊದಲು ತಿಳಿಯೋಣ..
ಪಹಲ್ಗಾಮ್ ನರಮೇಧ-ಸಿಂಧೂರ ಪ್ರತೀಕಾರ
ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಏ.22ರಂದು ಸೈನಿಕರ ಸೋಗಿನಲ್ಲಿ ಬಂದ ಉಗ್ರರು ಅಮಾಯಕರನ್ನ ಗುಂಡಿಟ್ಟು ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದೇ ಪಣ ತೊಟ್ಟಿದ್ದ ಭಾರತ ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರ 9 ಅಡಗುತಾಣಗಳನ್ನ ಧ್ವಂಸ ಮಾಡಿತು. ಆದ್ರೂ ಮತ್ತೆ ಕಿತಾಪತಿ ಮಾಡಿದ್ದ ಪಾಕ್ ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಹೊಂಚುಹಾಕಿತ್ತು. ಇದನ್ನರಿತ ಭಾರತ, ಪಾಕ್ ದಾಳಿಯನ್ನ ವಿಫಲಗೊಳಿಸಿದ್ದಲ್ಲದೇ ಲಾಹೋರ್‌ನಲ್ಲಿನ ರೆಡಾರ್ ಕೇಂದ್ರವನ್ನೇ ಛಿದ್ರ ಛಿದ್ರ ಮಾಡಿತು. ಪಾಕ್ ಜೊತೆಗಿನ ಈ ಸಂಘರ್ಷ ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗೂಡುವಂತೆ ಮಾಡಿತು. ಈ ಬೆಳವಣಿಗೆಯ ನಂತರ ಶತ್ರು ರಾಷ್ಟ್ರಗಳೊಂದಿಗಿನ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಯಿತು. ಆದ್ದರಿಂದಲೇ ಇನ್ನೆಂದಿಗೂ ಭಾರತ – ಪಾಕಿಸ್ತಾನ ನಡುವೆ ಪಂದ್ಯವನ್ನಾಡಬಾರದು ಎಂಬ ಒತ್ತಾಯ ಭಾರತೀಯರದ್ದಾಗಿದೆ. ಆದ್ರೆ ಇದು ಪಂದ್ಯ ಕ್ರೀಡೆಯಾದ ಕಾರಣ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಆಡಬೇಕೆಂಬ ನಿಯಮವೂ ಇರುವ ಕಾರಣ, ಕೇಂದ್ರ ಸರ್ಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಪಂದ್ಯವನ್ನು ರದ್ದುಗೊಳಿಸುವ ನಿರ್ಣಯಕ್ಕೆ ಬಂದಿಲ್ಲ. ಇದಕ್ಕೂ ಹಿಂದಿನ ಇತಿಹಾಸವನ್ನೊಮ್ಮೆ ನೋಡಿಬಿಡೋಣ…
ಇತಿಹಾಸವೇ ರೋಚಕ!
ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್ ಯುದ್ಧದ ನಂತರವೂ ಭಾರತ ಮತ್ತು ಪಾಕ್ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು. ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?
ನೆನಪಿದೆಯಾ ಆ ಕರಾಳ ದಿನ..?
2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಇದಾದ ಬಳಿಕ 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಪಾಕ್ ಉಗ್ರರು, ಭಾರತೀಯ ಯೋಧರನ್ನು ಭೀಕರವಾಗಿ ಬಾಂಬ್ ದಾಳಿಯಲ್ಲಿ ಕೊಂದರು. ಇದು ಇನ್ನಷ್ಟು ಭಾರತೀಯರ ನಿದ್ದೆಗೆಡಿಸಿತ್ತು.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.
2016ರಲ್ಲಿ ಕೊನೆಯದ್ದಾಗಿ ಭಾರತಕ್ಕೆ ಬಂದಿದ್ದ ಪಾಕ್ ಈಡನ್ ಗಾರ್ಡನ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿತ್ತು. ಅಂದು ಮಳೆ ಅಡ್ಡಿಯಾದ್ದರಿಂದ ಪಾಕ್ ತಂಡ ನೀಡಿದ್ದ 119 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ತಲುಪಲು ಭಾರತಕ್ಕೆ ಟಾರ್ಗೆಟ್ ನೀಡಲಾಗಿತ್ತು. ಇನ್ನೂ 2023ರ ಏಕದಿನ ಏಷ್ಯಾಕಪ್, ಏಕದಿನ ವಿಶ್ವಕಪ್, 2024ರಲ್ಲಿ ನಡೆದ ಟಿ20 ವಿಶ್ವಕಪ್ ಹಾಗೂ ಪ್ರಸಕ್ತ ವರ್ಷದಲ್ಲಿ ನಡೆದ ಸಾಲು ಸಾಲು ಟೂರ್ನಿಗಳಲ್ಲಿ ಟೀಂ ಇಂಡಿಯಾ ಪಾಕ್ ತಂಡವನ್ನ ಬಗ್ಗು ಬಡಿಯಿತು.
ಇದೀಗ ಆಪರೇಷನ್ ಸಿಂಧೂರ ಬಳಿಕ ಮುಖಾಮುಖಿ ಯಾಗುತ್ತಿರುವ ಪಂದ್ಯದಲ್ಲಿ ಮತ್ತೆ ಪಾಕ್‌ಗೆ ಮಣ್ಣುಮುಕ್ಕಿಸಲು ಭಾರತ ಎದುರುನೋಡುತ್ತಿದೆ. ಅತ್ತ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಒಟ್ಟಿನಲ್ಲಿ ಸೂಪರ್ ಸಂಡೇ ರಣರೋಚಕವಾದ ಈ ಪಂದ್ಯದಲ್ಲಿ ಬದ್ಧವೈರಿಯ ಹುಟ್ಟಡಗಿಸುವುದನ್ನ ಕಣ್ತುಂಬಿಕೊಳ್ಳಲು 140 ಕೋಟಿ ಭಾರತೀಯರು ಕಾಯುತ್ತಿದ್ದಾರೆ.