ಬೆಂಗಳೂರು: ತಾಜ್ ವೆಸ್ಟೆಂಡ್ ಹೋಟೆಲಿನ ರೂಂ ನನಗೆ ಅದೃಷ್ಟ ತಂದು ಕೊಟ್ಟಿದೆ. ಅದಕ್ಕೆ ನಾನು ಆ ರೂಂಗೆ ಹೋಗುತ್ತಿರುತ್ತೇನೆ ಬಿಟ್ಟರೆ ಬೇರೆ ಯಾವುದೇ ಕಾರಣ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸ್ಪಷ್ಟಪಡಿಸಿದ ಸಿಎಂ, ನಾನು ಗುಡಿಸಲಲ್ಲೂ ಬದುಕುಬಲ್ಲೆ. ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ರೂಂ ಇಟ್ಟುಕೊಂಡಿರುವುದು ವ್ಯಾಪಾರಕ್ಕಲ್ಲ. ಅದು ಅದೃಷ್ಟದ ರೂಂ ಹೀಗಾಗಿ ನಾನು ಅಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತೇನೆ. ಇಷ್ಟಕ್ಕೆ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ನನ್ನ ಬಗ್ಗೆ ಹಗಲೆಲ್ಲ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಹೋಟೆಲ್ ರೂಂನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಾರೆ. ನಾನು ಅಲ್ಲಿಗೆ ಹೋಗುವುದು ಮೋಜು ಮಸ್ತಿ ಮಾಡುವುದಕ್ಕಲ್ಲ ಸಮಸ್ಯೆಗಳೆದುರಾದಾಗ ಏನಾದರೂ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಹೋಗುತ್ತೇನೆ ಎಂದು ಹೇಳಿದರು.
Advertisement
Advertisement
2018ರ ವಿಧಾಸಭಾ ಚುನಾವಣೆಯ ಫಲಿತಾಂಶವನ್ನು ಹೋಟೆಲಿನ ರೂಂನಲ್ಲಿ ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಅದೇ ಸಮಯದಲ್ಲಿ ಗುಲಾಂ ನಬಿ ಅಜಾದ್ ಅವರು ಕರೆ ಮಾಡಿದರು. ನಂತರ ರಾಷ್ಟ್ರೀಯ ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿದ್ದೇವೆ. ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೂ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ನೀವೇ ಸಮ್ಮಿಶ್ರ ಸರ್ಕಾರದ ಜವಾಬ್ದಾರಿ ನಿರ್ವಹಿಸಬೇಕು ಎಂದು ಕೇಳಿಕೊಂಡರು. ನೀವೇ ಮುಖ್ಯಮಂತ್ರಿಯಾಗಿ ಎಂದು ಸಹ ತಿಳಿಸಿದರು. ಈ ಕಾರಣಕ್ಕೆ ರೂಂ ಅದೃಷ್ಟ ಎಂದು ಭಾವಿಸಿ ಅಲ್ಲಿಗೆ ತೆರಳುತ್ತಿದ್ದೆ ಎಂದು ಹೇಳಿದರು.
Advertisement
ರೆಸಾರ್ಟಿನಲ್ಲಿ ಕುಳಿತು ಸರ್ಕಾರಿ ಹಣ ವ್ಯರ್ಥ ಮಾಡಿಲ್ಲ. ನಾನು ಸರ್ಕಾರಿ ಕಾರು, ಬಂಗಲೆ ತೆಗೆದುಕೊಂಡಿಲ್ಲ, ಟಿಎ, ಡಿಎ, ಪೆಟ್ರೋಲ್ ಗಾಗಿ ಹಣ ಪಡೆದಿಲ್ಲ. ಸರ್ಕಾರದ ಯಾವುದೇ ಹಣವನ್ನು ಪೋಲು ಮಾಡಿಲ್ಲ. ಸರ್ಕಾರದ ಮನೆಯನ್ನು ತಗೆದುಕೊಂಡಿಲ್ಲ. ನನ್ನ ಸ್ವಂತ ಕಾರಿನಲ್ಲೇ ಓಡಾಡುತ್ತಿದ್ದೇನೆ. ರಾಜ್ಯದ ಜನತೆಯ ತೆರಿಗೆ ಹಣವನ್ನು ಖರ್ಚು ಮಾಡಬೇಕಾದಲ್ಲಿ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡು ನಿಭಾಯಿಸುತ್ತೇನೆ. ಖರ್ಚು ಮಾಡಲು ಚಿಂತಿಸುತ್ತೇನೆ ಎಂದು ತಿಳಿಸಿದರು.