ಇತ್ತೀಚಿನ ದಿನಗಳಲ್ಲಿ ಆಯುರ್ವೇದ, ಗಿಡಮೂಲಿಕೆ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುವ ಹೊಸ ಹೊಸ ಜಾಲಗಳು ಹುಟ್ಟಿಕೊಳ್ಳುತ್ತಲೇ ಇವೆ. ಅದೇ ರೀತಿ ಈಗ ನಿಕೋಟಿನ್ ಬದಲಿಗೆ ಹರ್ಬಲ್ ಸಿಗರೇಟ್ (Herbal Cigarette) ಹೆಸರಲ್ಲಿ ಜನರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. ಅದು ಆರೋಗ್ಯಕ್ಕೆ (Health) ಹಾನಿಕಾರಕವಲ್ಲ ಎಂದು ಬಿಂಬಿಸಿ ಜನರ ಜೀವದ ಜೊತೆ ಆಟ ಆಡುತ್ತಿದೆ ಈ ಕರಾಳ ಜಾಲ. ಹಾಗಾದ್ರೆ ಈ ಹರ್ಬಲ್ ಸಿಗರೇಟ್ ಎಂದರೇನು? ಇದೆಷ್ಟು ಹಾನಿ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಏನಿದು ಈ ಹರ್ಬಲ್ ಸಿಗರೇಟ್?
ತಂಬಾಕಿನ (Tobacco) ಬದಲಿಗೆ ಈ ಹರ್ಬಲ್ ಸಿಗರೇಟ್‌ಗಳು ಹುಟ್ಟಿಕೊಂಡಿವೆ. ಇವು ನಿಕೋಟಿನ್‌ಗೆ ಪರ್ಯಾಯವಾದ ಸಿಗರೇಟ್ ಎಂದು ಬಿಂಬಿಸಲಾಗಿದೆ. ಇವುಗಳ ಪ್ಯಾಕ್ ಮೇಲೆ ನೈಸರ್ಗಿಕ, ತಂಬಾಕು ಮುಕ್ತ, ರಾಸಾಯನಿಕ-ಮುಕ್ತ ಎಂಬ ಸೂಚನೆಗಳನ್ನು ಉಲ್ಲೇಖಿಸಲಾಗಿರುತ್ತದೆ. ಇದರಿಂದ ಈ ಉತ್ಪನ್ನಗಳು ಹಾನಿಕಾರಕವಲ್ಲ ಎಂದು ಜನ ಭಾವಿಸುತ್ತಾರೆ. ಅಲ್ಲದೇ ಇದನ್ನು ಕೊಂಡು ಇವುಗಳಿಗೆ ದಾಸರಾಗುತ್ತಾರೆ. ಆದರೆ ಇತ್ತೀಚಿನ ಅಧ್ಯಯನಗಳು ಇವುಗಳಿಂದಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಿವೆ.

ಸಂಶೋಧನೆ ಏನು ಹೇಳುತ್ತದೆ?
ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಹಾಗೂ ಇಲಿನಾಯ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಹರ್ಬಲ್ ಸಿಗರೇಟ್‌ಗಳನ್ನು ಸಾಮಾನ್ಯ ತಂಬಾಕಿನ ಸಿಗರೇಟ್‌ಗಿಂತ ಹೆಚ್ಚಿನ ಅಪಾಯಕಾರಿ ಎಂದು ಸಾಬಿತು ಪಡಿಸಿದ್ದಾರೆ.
ಗಿಡಮೂಲಿಕೆ ಸಿಗರೇಟ್‌ಗಳಿಂದ (ಭಾರತದಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳು) ಹೊಗೆಯನ್ನು ಸಾಂಪ್ರದಾಯಿಕ ತಂಬಾಕು ಸಿಗರೇಟ್‌ಗಳಿಂದ ಬರುವ ಹೊಗೆಯೊಂದಿಗೆ ವಿಜ್ಞಾನಿಗಳು ಹೋಲಿಸಿದ್ದಾರೆ. ಈ ಪ್ರಯೋಗದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ.
ಕೆಲವು ಹರ್ಬಲ್ ಸಿಗರೇಟ್‌ಗಳಲ್ಲಿ ತುಳಸಿ, ಲವಂಗ, ದಾಲ್ಚಿನ್ನಿ, ಪುದೀನ, ಕ್ಯಾಮೊಮೈಲ್, ಗ್ರೀನ್ ಟೀ ಮತ್ತು ವಾಟರ್ ಲಿಲ್ಲಿಯಂತಹ ವಸ್ತುಗಳನ್ನು ಬಳಸಲಾಗುತ್ತದೆ. ಯಾವುದೇ ಸಸ್ಯವಾಗಿರಲಿ ಅದು ತಂಬಾಕು, ತುಳಸಿ ಅಥವಾ ಪುದೀನವಾಗಿರಲಿ ಅವುಗಳನ್ನು ಸುಡುವುದರಿಂದ ಸೂಕ್ಷ್ಮ ಕಣಗಳು, ವಿಷಕಾರಿ ಅನಿಲಗಳು, ಭಾರ ಲೋಹಗಳು ಮತ್ತು ರಾಸಾಯನಿಕಗಳಿಂದ ತುಂಬಿದ ಹೊಗೆ ಉತ್ಪತ್ತಿಯಾಗುತ್ತದೆ. ಆ ಹೊಗೆ ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಹೃದಯಕ್ಕೆ ಹಾನಿ ಮಾಡುತ್ತದೆ.
ತಂಬಾಕಿನ ಹೊಗೆಗೆ ಹೋಲಿಸಿದರೆ ಗಿಡಮೂಲಿಕೆ ಸಿಗರೇಟ್‌ಗಳು ಸುಮಾರು 20% ಹೆಚ್ಚು ಅಲ್ಟ್ರಾ-ಸೂಕ್ಷ್ಮ ಕಣಗಳನ್ನು (500 ನ್ಯಾನೊಮೀಟರ್‌ಗಳಿಗಿಂತ ಕಡಿಮೆ) ಬಿಡುಗಡೆ ಮಾಡುತ್ತವೆ. ಆ ಸಣ್ಣ ಕಣಗಳು ಶ್ವಾಸಕೋಶಕ್ಕೆ ಆಳವಾಗಿ ಹೋಗಬಹುದು. ರಕ್ತಕ್ಕೆ ಸೇರುವ ಅಪಾಯ, ಉಸಿರಾಟ ಮತ್ತು ಹೃದಯದ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು. ಅದರ ಜೊತೆಗೆ, ಗಿಡಮೂಲಿಕೆ ಸಿಗರೇಟ್ ಹೊಗೆ ಹೆಚ್ಚಿನ ಆಕ್ಸಿಡೇಟಿವ್ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಇದು ಶ್ವಾಸಕೋಶದ ಅಸ್ವಸ್ಥತೆ ಮತ್ತು ಹೃದಯ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಹೆಚ್ಚಿನ ಜೀವಕೋಶ-ಹಾನಿಕಾರಕಗಳನ್ನು ಹೊಂದಿದೆ.

ಟಾರ್, ಕಾರ್ಬನ್ ಮಾನಾಕ್ಸೈಡ್ ಮತ್ತು ವಿವಿಧ ಕ್ಯಾನ್ಸರ್-ಉಂಟುಮಾಡುವ ರಾಸಾಯನಿಕಗಳನ್ನು ಸಾಮಾನ್ಯ ಸಿಗರೇಟ್‌ಗಳಂತೆಯೇ ಇವು ಉತ್ಪಾದಿಸುತ್ತವೆ. ಬೆಂಜೀನ್, ಫಾರ್ಮಾಲ್ಡಿಹೈಡ್, ಪಿಎಹೆಚ್‌ಗಳು ಮತ್ತು ಕಾರ್ಬನ್ ಮಾನಾಕ್ಸೈಡ್ ಎಲ್ಲವೂ ಹರ್ಬಲ್ ಸಿಗರೇಟ್ ಹೊಗೆಯಲ್ಲಿ ಕಂಡುಬರುತ್ತವೆ. ಕೆಲವೊಮ್ಮೆ, ಟಾರ್ ಮತ್ತು ಕಾರ್ಬನ್ ಮೊನಾಕ್ಸೈಡ್ ಮಟ್ಟಗಳು ತಂಬಾಕು ಉತ್ಪನ್ನಗಳಿಗಿಂತ ಹೆಚ್ಚಿರುತ್ತವೆ.
“ನೈಸರ್ಗಿಕ” ಎಂಬ ಲೇಬಲ್ ಯಾವಾಗಲೂ ಸುರಕ್ಷಿತ ಎಂದು ಜನ ಭಾವಿಸುತ್ತಾರೆ. ತಂಬಾಕು ಸ್ವತಃ ಒಂದು ಸಸ್ಯ, ಇದೇ ರೀತಿ ಯಾವ ಸಸ್ಯವನ್ನೂ ಸುಟ್ಟರೂ ಬರುವುದು ವಿಷಕಾರಿ ಅಂಶವೆ ಎಂಬುದು ಸಂಶೋಧಕರ ಮಾತು.
ಇವು ಕಡಿಮೆ ವ್ಯಸನಕಾರಿ – ಆದರೆ ಸುರಕ್ಷಿತವಲ್ಲ
ಹರ್ಬಲ್ ಸಿಗರೇಟ್‌ಗಳು ಸುರಕ್ಷಿತ ಎಂಬ ಕಲ್ಪನೆಯಿಂದ ಬಹಳಷ್ಟು ಜನರು ಖರೀದಿಸುತ್ತಾರೆ ಎಂದು ಸಮೀಕ್ಷೆಗಳ ಪ್ರಕಾರ ಹೊಗೆಯನ್ನು ಒಮ್ಮೆ ಉಸಿರಾಡಿದ ನಂತರ ಹಲವಾರು ಹಾನಿಕಾರಕ ಅಂಶಗಳು ಶ್ವಾಸಕೋಶದಲ್ಲಿ ಸೇರಿಕೊಂಡು ಉಳಿಯುತ್ತವೆ.
ಸಿಗರೇಟ್ ಬಿಡೋಕೆ ವೈದ್ಯರ ಸಲಹೆ ಏನು?
1) ಎನ್‌ಆರ್‌ಟಿ: ಇದು ಸಾಮಾನ್ಯವಾಗಿ ಬಳಸುವ ಧೂಮಪಾನ-ಬಿಡುವ ಔಷಧಿಯಾಗಿದೆ. ವ್ಯಕ್ತಿಗೆ ಸಣ್ಣ ಮತ್ತು ನಿಯಂತ್ರಿತ ಪ್ರಮಾಣದ ನಿಕೋಟಿನ್ ನೀಡುವ ಮೂಲಕ ಧೂಮಪಾನದ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ.
2) ವ್ಯಾಯಾಮ: ಆಳವಾದ ಉಸಿರಾಟದ ಅಭ್ಯಾಸಗಳು, ದೈಹಿಕ ಚಟುವಟಿಕೆ ಸಹಾಯದಿಂದ ಜನರು ಧೂಮಪಾನವನ್ನು ತ್ಯಜಿಸಲು ಸಹಾಯ ಮಾಡುವುದಾಗಿದೆ.
3) ಧೂಮಪಾನವನ್ನು ತ್ಯೆಜಿಸೋದ್ರಿಂದ ಆಗೋ ಲಾಭ: ಒಬ್ಬ ವ್ಯಕ್ತಿಯು ಧೂಮಪಾನವನ್ನು ತ್ಯಜಿಸಿದ ನಂತರ, ದೇಹವು ಅದಕ್ಕೆ ಆಗಿರುವ ಎಲ್ಲಾ ಹಾನಿಯನ್ನು ಸರಿಪಡಿಸಲು ಪ್ರಾರಂಭಿಸುತ್ತದೆ. ಅವರ ರುಚಿ ಮತ್ತು ವಾಸನೆಯ ಪ್ರಜ್ಞೆಯು ಸುಧಾರಿಸುತ್ತದೆ ಮತ್ತು ಅವರ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಇವುಗಳನ್ನು ಧೂಮಪಾನಿಗಳಿಗೆ ಮನವರಿಕೆ ಮಾಡಿದರೆ ಖಂಡಿತ ಬದಲಾವಣೆ ಸಾಧ್ಯವಿದೆ.
