ಬೆಂಗಳೂರು: ಬಿಗ್ ಬ್ರದರ್ ಕುಮಾರಸ್ವಾಮಿಯವರು (H.D Kumaraswamy) ನಕಲಿ ಕೆಲಸ ಮಾಡಲ್ಲ, ಅವರು ಸಚ್ಚಾ ಕೆಲಸ ಮಾಡೋರು. ಆದರೆ ಅವರ ಸಹಿ ಫೋರ್ಜರಿ ಎಂದಿದ್ದಾರೆ. ಆದರೂ ಏಕೆ ದೂರು ಕೊಟ್ಟಿಲ್ಲ? ಈಗಲಾದ್ರೂ ದೂರು ಕೊಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar)ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನದು ಸಹಿ ಅಲ್ಲದೆ ಹೋಗಿದ್ರೆ ನೀನು ಏಕೆ ಕೋರ್ಟ್‍ಗೆ ಹೋಗಿದ್ದೀಯಾ? ಅಲ್ಲಿ ಸಹಿ ಮಾಡಿದ್ದೀನಿ ಎಂದು ಹೇಳಿದ್ದೀಯಾ? ಮಾಧ್ಯಮದ ಮುಂದೆ ಏಕೆ ಸುಳ್ಳು ಹೇಳ್ತಾ ಇದ್ದೀಯಾ? ನೀನು ಕೇಂದ್ರ ಸಚಿವ, ಸಂವಿಧಾನದ ಬದ್ಧವಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಸತ್ಯ ಹೇಳಬೇಕು ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.
ಒಬ್ಬ ಸಿಎಂ ಆಗಿದ್ದವನು ಬೇಲ್ ಅಪ್ಲಿಕೇಶನ್‍ನಲ್ಲಿ ಏಕೆ ನನ್ನದೇ ಸಹಿ ಅಂತಾ ಒಪ್ಪಿಕೊಂಡ್ರು? ಯಾಕೆ ದೂರು ದಾಖಲಿಸಿಲ್ಲ. ನಿನಗೆ ಪೊಲೀಸ್ ಇದ್ದಾರೆ, ದೊಡ್ಡ ಸರ್ಕಾರದಲ್ಲಿದ್ದೀಯಾ. ಮಂಡ್ಯ, ಮಾಗಡಿ, ರಾಮನಗರ ಎಲ್ಲಿಯಾದ್ರೂ ದೂರು ಕೊಡಿ, ಗೌರವಾನ್ವಿತ ಹೆವಿ ಇಂಡಸ್ಟ್ರೀಸ್ ಅಂಡ್ ಸ್ಟೀಲ್ ಮಿನಿಸ್ಟರ್ ಕುಮಾರಸ್ವಾಮಿ ಸತ್ಯಕ್ಕೆ ಹೆಸರುವಾಸಿ ಆದವರು. ಪಾಪ ಮುಗ್ಧ ಕುಮಾರಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.
ನ. 21-2023 ರಲ್ಲಿ ಲೋಕಾಯುಕ್ತ ಎಸ್‌ಐಟಿ ಅವರು ರಾಜ್ಯಪಾಲರಿಗೆ ಪತ್ರ ಕಳುಹಿಸಿಕೊಟ್ಟಿದ್ದಾರೆ. ಪ್ರಾಸಿಕ್ಯೂಶನ್ ಗೆ ಕೇಳಿದ್ದಾರೆ. 218 ಪುಟಗಳ ವರದಿ ಕಳುಹಿಸಿದ್ದಾರೆ. ತನಿಖೆ ಮಾಡಿ ಎಸ್‍ಐಟಿ ಹಾಗೂ ಐಜಿಪಿ ಚಂದ್ರಶೇಖರ್ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿದ್ದಾರೆ. ಆದ್ರೆ ರಾಷ್ಟ್ರದ ಸ್ಟೀಲ್ ಆಂಡ್ ಹೆವಿ ಇಂಡಸ್ಟ್ರೀಸ್ ಮಂತ್ರಿ ಅವರು. ಸತ್ಯ ಹೇಳೋರು ಅವರು. ನಾನು ಸಹಿಯನ್ನೇ ಮಾಡಿಲ್ಲ ಅಂತಾ ಅವರು ಹೇಳಿದ್ದಾರೆ ಎಂದು ಕಿಡಿಕಾರಿದರು.
10 ವರ್ಷಗಳ ಹಿಂದಿನ ಪ್ರಕರಣದಲ್ಲಿ ತನಿಖೆ ನಡೆದಿದೆ. ಒಬ್ಬ ಚೀಫ್ ಮಿನಿಸ್ಟರ್ ಸಹಿ ಫೋರ್ಜರಿ ಮಾಡ್ತಾರೆ ಅಂದ್ರೆ ನೀನು ದೂರು ಕೊಡಬೇಕಲ್ಲವಾ? ಮುಖ್ಯ ಕಾರ್ಯದರ್ಶಿಗಾದ್ರೂ ದೂರು ಕೊಡಬೇಕು ಅಲ್ವಾ? ನಾನು ಅವರ ಕುಟುಂಬದ ಬಗ್ಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದೆ, ಉತ್ತರ ಕೊಡಲಿಲ್ಲ. ಓಹೋ.. ನನ್ನ ಕುಟುಂಬದ ವಿರುದ್ಧ ಮಾತಾಡ್ತಾರೆ ಅಂತಾ ಕೂಗಾಡಿದ್ದ. ನೀನು ಬೇರೆಯವರ ಕುಟುಂಬದ ವಿಷಯಕ್ಕೆ ಹೋಗಬಹುದಾ? ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.