ಬೇಸಿಗೆಯಲ್ಲಿ (Summer) ಬಿಸಿಲಿನ ಧಗೆಯಿಂದ ವಿರಾಮ ತೆಗೆದುಕೊಳ್ಳಲು ತಂಪು ಹವಾಮಾನವಿರುವ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಅಂತಹುದೇ ತಂಪಿನ ವಾತಾವರಣ ಹೊಂದಿರುವ ಸ್ಥಳಗಳ ಪೈಕಿ ಮನಾಲಿ (Manali) ಕೂಡ ಒಂದು. ವಿಶೇಷವಾಗಿ, ಮನಾಲಿ ಒಂದು ಹನಿಮೂನ್ ಸ್ಪಾಟ್ (Honeymoon Spot) ಆಗಿ ಹೆಸರುವಾಸಿಯಾಗಿದೆ. ಬೇಸಿಗೆಯ ಸಮಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು (Tourists) ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಿದ್ರೆ ಬೇಸಿಗೆಯಲ್ಲಿ ಮನಾಲಿ ಹವಾಮಾನ ಹೇಗಿರುತ್ತೆ? ಪ್ರೇಕ್ಷಣೀಯ ಸ್ಥಳಗಳು ಯಾವುದು? ಬೇಸಿಗೆಯಲ್ಲಿ ಹೆಚ್ಚಿನ ಜನರು ಮನಾಲಿಯನ್ನೇ ಆಯ್ದುಕೊಳ್ಳುವುದೇಕೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಮನಾಲಿ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಅದ್ಭುತವಾದ ಗಿರಿಧಾಮವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1,990 ಮೀಟರ್ ಎತ್ತರದಲ್ಲಿರುವ ಇದು, ಸಾಹಸ ಕ್ರೀಡೆಗಳು ಮತ್ತು ಹನಿಮೂನ್ ಪ್ರವಾಸಕ್ಕೆ ಹೆಸರುವಾಸಿಯಾಗಿದೆ.
ಸುಡುವ ಬೇಸಿಗೆಯಲ್ಲೂ ತಂಪಾದ ವಾತಾವರಣ:
ಭಾರತದ ಅನೇಕ ಭಾಗಗಳಲ್ಲಿ ಬಿಸಿಲಿನ ತಾಪ ಮುಗಿಲು ಮುಟ್ಟುತ್ತಿದ್ದರೆ ಮನಾಲಿಯಲ್ಲಿ ಮಾತ್ರ ಚುಮು ಚುಮು ಚಳಿಯ ಅನುಭವ ಪಡೆಯಬಹುದು. ಕುಟುಂಬ ಅಥವಾ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಪ್ರವಾಸ ಕೈಗೊಳ್ಳಲು ಮನಾಲಿ ದಿ ಬೆಸ್ಟ್ ಆಯ್ಕೆ ಎಂದೇ ಹೇಳಬಹುದು. ಅತ್ಯಾಕರ್ಷಕವಾದ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಲು ಅಥವಾ ಟ್ರೆಕ್ಕಿಂಗ್ ಮಾಡಲು ಅಥವಾ ಸಾಹಸ ಚಟುವಟಿಕೆಗಳನ್ನು ಆನಂದಿಸುವ ಸಲುವಾಗಿ ಅನೇಕರು ಇಲ್ಲಿಗೆ ತೆರಳುತ್ತಾರೆ.
ಕಣ್ಮನ ಸೆಳೆಯುವ ಹಿಮ:
ಮನಾಲಿಯು ಕಣ್ಮನ ಸೆಳೆಯುವ ಹಿಮದ ವಾತಾವರಣದಿಂದ ಕಂಗೊಳಿಸುತ್ತದೆ. ಬೆಟ್ಟಗುಡ್ಡಗಳ ಮೇಲೆ ಹಿಮದ ಸೌಂದರ್ಯ, ಹೆಪ್ಪುಗಟ್ಟಿದ ಹಿಮದ ಜಲಪಾತ ನೋಡುವವರ ಮೈಮನ ತಣಿಸುತ್ತದೆ. ಮನಾಲಿಯ ಇಂತಹ ಸೊಬಗನ್ನು ನೋಡುವುದೇ ಸೋಜಿಗ. ಇದೇ ಕಾರಣಕ್ಕೆ ಜನರು ಹೆಚ್ಚಾಗಿ ಮನಾಲಿಗೆ ತೆರಳಲು ಬಯಸುತ್ತಾರೆ.
ಪ್ರೇಕ್ಷಣೀಯ ಸ್ಥಳಗಳು:
ಮನಾಲಿಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಈ ಪೈಕಿ ಹಡಿಂಬಾ ದೇವಾಲಯ, ಭೃಗು ಸರೋವರ, ಸೋಲನ್ ಕಣಿವೆ,ಮನಾಲಿ ಅಭಯಾರಣ್ಯ ಹೀಗೆ ಅನೇಕ ಸುಂದರವಾದ ತಾಣಗಳು ಇಲ್ಲಿವೆ.
ಹಿಡಿಂಬಾ ದೇವಾಲಯ:
ಕುಟುಂಬದ ಜೊತೆ ಮನಾಲಿ ಪ್ರವಾಸ ಕೈಗೊಳ್ಳುವವರು ಮೊದಲು ಭೇಟಿ ನೀಡಲೇಬೇಕಾದ ಪ್ರವಾಸಿ ಆಕರ್ಷಣೆ ಎಂದರೆ ಅದು ಹಿಡಿಂಬಾ ದೇವಾಲಯ. ಇದು ಮನಾಲಿಯ ಪ್ರಾಚೀನ ಆಲಯವು ಹೌದು. ಸ್ಥಳೀಯರು ಈ ಆಲಯವನ್ನು ‘ಧುಂಗಾರಿ ಮಂದಿರ’ ಎಂದೂ ಸಹ ಕರೆಯುತ್ತಾರೆ. ಇಲ್ಲಿ 15 ನೇ ಶತಮಾನಕ್ಕೆ ಸೇರಿದ ವಾಸ್ತುಶಿಲ್ಪವನ್ನು ನೋಡಬಹುದು. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಸುಂದರವಾದ ದೇವದಾರು ಕಾಡುಗಳು ದೇವಾಲಯವನ್ನು ಸುತ್ತುವರೆದಿದೆ. ಬೆಳಿಗ್ಗೆ 8:00 ರಿಂದ ಸಂಜೆ 6:00 ರವರೆಗೆ ದೇವಾಲಯವು ಭಕ್ತರಿಗಾಗಿ ತೆರೆದಿರುತ್ತದೆ.
ಭೃಗು ಸರೋವರ:
ಕುಟುಂಬದ ಜೊತೆ ಸರೋವರದ ಬಳಿ ಪಿಕ್ನಿಕ್ ಮಾಡಲು ಬಯಸಿದರೆ ನೀವು ಭೃಗು ಸರೋವರಕ್ಕೆ ಹೋಗಲು ಪ್ಲಾನ್ ಮಾಡಬಹುದು. ಈ ಸುಂದರವಾದ ಸರೋವರವು ತನ್ನ ಪ್ರಶಾಂತತೆ ಮತ್ತು ಸ್ಫಟಿಕ-ಸ್ಪಷ್ಟ ನೀಲಿ ನೀರನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಸ್ಥಳೀಯರು ಇದನ್ನು ದೇವರ ಕೊಳ ಎಂದೂ ಸಹ ಕರೆಯುತ್ತಾರೆ. ಈ ಭವ್ಯವಾದ ಸರೋವರವು ನಿತ್ಯಹರಿದ್ವರ್ಣ ಮರಗಳ ಕಾಡುಗಳು ಮತ್ತು ಆಲ್ಪೈನ್ ಹುಲ್ಲುಗಾವಲುಗಳಿಂದ ಆವೃತವಾಗಿದೆ. ಈ ಸರೋವರ ಸಮುದ್ರ ಮಟ್ಟದಿಂದ ಸುಮಾರು 4,000 ಅಡಿ ಎತ್ತರದಲ್ಲಿದೆ.
ಸೋಲನ್ ಕಣಿವೆ:
ಹಿಮ ಹಾಗೂ ಹಚ್ಚ ಹಸಿರಿನ ನೋಟವನ್ನು ಒಂದೇ ಸೂರಿನಲ್ಲಿ ನೋಡಲು ನೀವು ಬಯಸುವುದಾದರೆ ತಪ್ಪದೇ ಮನಾಲಿಯ ಸೋಲನ್ ಕಣಿವೆಗೆ ಭೇಟಿ ನೀಡಿ. ಇಲ್ಲಿನ ಆಳವಾದ ಕಣಿವೆಯನ್ನು ಹಿಮ ಆವರಿಸಿಕೊಂಡಿರುವ ದೃಶ್ಯಾವಳಿಗಳು ಮನಸ್ಸಿಗೆ ಮುದ ನೀಡುತ್ತವೆ. ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಈ ಸೋಲನ್ ಕಣಿವೆ ಬೆಸ್ಟ್ ಆಯ್ಕೆಯಾಗಿದೆ. ಇದಲ್ಲದೆ, ಇಲ್ಲಿ ಕುದುರೆ ಸವಾರಿ, ಕೇಬಲ್ ಕಾರ್ ರೈಡ್‌ಗಳನ್ನು ಪ್ರಯತ್ನಿಸಬಹುದು. ಪ್ಯಾರಾಗ್ಲೈಡಿಂಗ್ ಮತ್ತು ಝೋರ್ಬಿಂಗ್‌ಗೆ ಸೋಲನ್ ಕಣಿವೆ ಪ್ರಸಿದ್ಧವಾಗಿದೆ.
ಮನಾಲಿ ಅಭಯಾರಣ್ಯ:
ಮನಾಲಿ ಅಭಯಾರಣ್ಯವು ಹಿಮಾಚಲ ಪ್ರದೇಶದ ಪ್ರಭಾವಶಾಲಿ ವನ್ಯಜೀವಿಗಳನ್ನು ಹೊಂದಿದೆ. 31.8 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಈ ಅಭಯಾರಣ್ಯವು ಬಾರ್ಕಿಂಗ್ ಜಿಂಕೆ, ಹಿಮಾಲಯನ್ ಕಪ್ಪು ಕರಡಿ, ಹಿಮಾಲಯನ್ ಪಾಮ್ ಸಿವೆಟ್, ಹಾರುವ ನರಿಗಳಿಗೆ ನೆಲೆಯಾಗಿದೆ. ಇದಲ್ಲದೆ, ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ಹಲವಾರು ಅವಕಾಶಗಳನ್ನು ಸಹ ನೀಡುತ್ತದೆ.
ಮಾಲ್ ರಸ್ತೆ:
ಕುಟುಂಬದ ಜೊತೆ ಊಟ, ಮನರಂಜನೆ, ಓಡಾಟ, ಶಾಪಿಂಗ್ ಎಂದು ತಿರುಗಲು ಬಯಸಿದರೆ ಮಾಲ್ ರಸ್ತೆಗೆ ಹೋಗಬಹುದು. ಮಾಲ್ ರಸ್ತೆಯು ಶಾಪಿಂಗ್ ಪ್ರಿಯರಿಗೆ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಮಾಲ್ ರಸ್ತೆಯು ಆಕರ್ಷಕ ಮಾರುಕಟ್ಟೆಗಳನ್ನು ಹೊಂದಿದೆ. ಪ್ರತಿದಿನ ಸಂಜೆ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಇಲ್ಲಿ ಜನರು ಮರದ ಕರಕುಶಲ ವಸ್ತುಗಳು, ಉಣ್ಣೆಯ ವಸ್ತುಗಳು, ಬೆಳ್ಳಿ ಆಭರಣಗಳು, ಕೀಚೈನ್‌ಗಳು, ನಾಮಫಲಕಗಳು, ಬೌದ್ಧ ವರ್ಣಚಿತ್ರಗಳನ್ನು ಖರೀದಿಸುತ್ತಾರೆ. ಬೀದಿ ಬದಿಯ ರುಚಿಕರ ಆಹಾರಗಳು ಸೇರಿದಂತೆ ಇನ್ನು ಅನೇಕ ಚಟುವಟಿಕೆಗಳನ್ನು ಇಲ್ಲಿ ಪ್ರಯತ್ನಿಸಬಹುದು.
ಟ್ರೆಕ್ಕಿಂಗ್ ಪ್ರೇಮಿಗಳ ಸ್ವರ್ಗ:
ಮನಾಲಿ ಸಾಹಸಿ ಪ್ರವಾಸಿಗರಿಗೂ ಕೂಡ ಸ್ವರ್ಗವಾಗಿದೆ. ಇಲ್ಲಿ ರೋಮಾಂಚಕಾರಿ ಟ್ರೆಕ್ಕಿಂಗ್ ಸ್ಥಳಗಳಿದ್ದು, ದಿ ಬೆಸ್ಟ್ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಂಪ್ಟಾ ಪಾಸ್ ಟ್ರೆಕ್, ಬಿಯಾಸ್ ಕುಂಡ್ ಟ್ರೆಕ್ ಮತ್ತು ಭೃಗು ಲೇಕ್ ಟ್ರೆಕ್ ಇಲ್ಲಿನ ಅತ್ಯಂತ ಪ್ರಸಿದ್ಧ ಟ್ರೆಕ್ಕಿಂಗ್ ಮಾರ್ಗಗಳಾಗಿವೆ.
ಸಾಹಸ ಚಟುವಟಿಕೆಗಳ ಕೇಂದ್ರ:
ಮನಾಲಿಯು ಥ್ರಿಲ್ಲಿಂಗ್ ಅನುಭವ ಪಡೆಯಲು ಬಯಸುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಏಕೆಂದರೆ, ಇಲ್ಲಿ ಕೇವಲ ಟ್ರೆಕ್ಕಿಂಗ್ ಮಾತ್ರವಲ್ಲದೆ, ವೈಟ್ ವಾಟರ್ ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್, ರಾಕ್ ಕ್ಲೈಂಬಿಂಗ್ ಸೇರಿದಂತೆ ಇನ್ನು ಅನೇಕ ರೋಮಾಂಚಕ ಚಟುವಟಿಕೆಗಳಿಗೆ ಫೇಮಸ್ ಆಗಿದೆ.
ಈಗಂತೂ ಪ್ರವಾಸಗಳನ್ನು ಮೈಂಡ್ ರಿಲ್ಯಾಕ್ಸ್ ಅಥವಾ ಎಂಜಾಯ್ ಮಾಡಲು ಹೋಗುವುದಕ್ಕಿಂತ ಹೆಚ್ಚಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗುವುದೇ ಹೆಚ್ಚು. ಹೀಗೆ ಫೋಟೋ ಗೀಳು ಇರುವವರಿಗೆ ಮನಾಲಿಯಷ್ಟು ಉತ್ತಮವಾದ ಸ್ಥಳ ಬೇರೊಂದು ಇಲ್ಲ ಎಂದರೆ ತಪ್ಪಾಗಲಾರದು.
ಭೇಟಿ ನೀಡಲು ಉತ್ತಮ ಸಮಯ:
ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಹಿಮಪಾತವನ್ನು ಆನಂದಿಸಲು ಉತ್ತಮ ಸಮಯವಾದರೆ, ಮಾರ್ಚ್‌ನಿಂದ ಜೂನ್‌ವರೆಗೆ ಆಹ್ಲಾದಕರ ವಾತಾವರಣವಿರುತ್ತದೆ .ಈ ಸಮಯದಲ್ಲಿ ಮನಾಲಿಗೆ ಭೇಟಿ ನೀಡಿ ನಿಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡಿ.
