ಬೆಂಗಳೂರು/ಬೆಳಗಾವಿ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ರೈತರ ಪ್ರತಿಭಟನೆ (Farmers Protest) ತೀವ್ರ ಸ್ವರೂಪ ಪಡೆದಿದ್ದು, 6ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿಯ (Belagavi) ಅಥಣಿ, ಚಿಕ್ಕೋಡಿ, ಗುರ್ಲಾಪುರ, ಜಾಂಬೋಟಿ, ಗೋಕಾಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಹುಕ್ಕೇರಿ ಪಟ್ಟಣವಂತೂ ಸಂಪೂರ್ಣ ಸ್ತಬ್ಧವಾಗಿತ್ತು. ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್‌ವರೆಗೆ ರ‍್ಯಾಲಿ ನಡೆಸಿ, ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಶಿವಯೋಗಿ ವೃತ್ತದಲ್ಲಿ ಜತ್ತ ಜಂಬೋಟಿ- ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆ ಮಾಡಿದರು.
ಟನ್ ಕಬ್ಬಿಗೆ (Sugarcane) 3,500 ರೂ. ನೀಡುವಂತೆ ರೈತರು ಬಿಗಿಪಟ್ಟು ಹಿಡಿದಿದ್ದಾರೆ. ಸರ್ಕಾರ ದರ ನಿಗದಿ ಮಾಡದಿದ್ದಲ್ಲಿ ಪಂಜಾಬ್ ಮಾದರಿ ಹೋರಾಟ ನಡೆಸೋದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿ ರೈತರಿಗೆ ಸಾಥ್ ನೀಡಿದ್ದು ರೈತರ ಜೊತೆಗೇ ಮಲಗುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡದಿದ್ರೆ ನಾಳೆ ಜನ್ಮದಿನವಿದ್ದರೂ ಹೋರಾಟ – ಬಿವೈವಿ
ಬೆಳಗಾವಿಯಲ್ಲಿ 29 ಸಕ್ಕರೆ ಕಾರ್ಖಾನೆಗಳಿದ್ದು, 20 ಕಾಂಗ್ರೆಸ್ ಹಾಗೂ 9 ಬಿಜೆಪಿ ನಾಯಕರಿಗೆ ಸೇರಿದ ಕಾರ್ಖಾನೆಗಳಿವೆ.

ಕಬ್ಬು ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತೆ?
ರಾಜ್ಯದಲ್ಲಿ 9.87 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ಬೆಳಗಾವಿ ಜಿಲ್ಲೆಯೊಂದರಲ್ಲೇ 29 ಸಕ್ಕರೆ ಕಾರ್ಖಾನೆಗಳಿವೆ.
2024ರಲ್ಲಿ 5.40 ಕೋಟಿ ಟನ್ ಕಬ್ಬು ಬೆಳೆಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1.94 ಕೋಟಿ ಟನ್ ಕಬ್ಬು ಅರೆಯಲಾಗಿದೆ. ಕರ್ನಾಟಕದಲ್ಲಿ ಒಟ್ಟು 41 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾದರೆ ಬೆಳಗಾವಿಯಲ್ಲೇ ಈ ಪೈಕಿ 16.15 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಇದನ್ನೂ ಓದಿ: ಕಬ್ಬು ಬೆಳೆ ಬೆಲೆ ನಿಗದಿಗೆ ಆಗ್ರಹ – ಕಟ್ಟೆಯೊಡೆದ ರೈತರ ಕಿಚ್ಚು; ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ
ಕೇಂದ್ರದ ಎಫ್‌ಆರ್‌ಪಿ ದರ ಎಷ್ಟು?
ಪ್ರತಿ ವರ್ಷ ಕೇಂದ್ರ ಸರ್ಕಾರ ನ್ಯಾಯಯುತ, ಲಾಭದಾಯಕ ದರವನ್ನು(FRP) ನಿಗದಿ ಮಾಡುತ್ತದೆ. ಈ ಬಾರಿ ಪ್ರತಿ ಟನ್‌ಗೆ 3,550 ರೂ. ಎಫ್‌ಆರ್‌ಪಿ ದರ ಘೋಷಣೆ ಮಾಡಲಾಗಿದೆ.
1 ಟನ್ ಕಬ್ಬಿಗೆ ರಿಕವರಿ ರೇಟ್ 10.25% (102 ಕೆಜಿ) ಸಕ್ಕರೆ ಉತ್ಪಾದನೆಯಾದ್ರೆ ಉತ್ತಮ ಇಳುವರಿ ಸಿಗುತ್ತದೆ. ಉತ್ತಮ ಇಳುವರಿಗೆ ಕೇಂದ್ರದಿಂದ 3,550 ರೂ. ನಿಗದಿ(ಕಠಾವು, ಸಾಗಾಟ ವೆಚ್ಚ ಸೇರಿ 3550 ರೂ.) ಮಾಡಲಾಗಿದೆ.
ರಿಕವರಿ ರೇಟ್ 10.25% ಸಕ್ಕರೆ ಉತ್ಪಾದನೆಗಿಂತ ಕಮ್ಮಿ ಇದ್ದರೆ 3,290 ರೂ. ನಿಗದಿ ಮಾಡಲಾಗಿದೆ. ಕೇಂದ್ರ ಘೋಷಿಸಿರುವ ಎಫ್‌ಆರ್‌ಪಿಯಲ್ಲಿ ಕಟಿಂಗ್, ಸರಬರಾಜು ಕೂಡ ಸೇರಿರುತ್ತದೆ.
ರೈತರ ಬೇಡಿಕೆಗಳು ಏನು?
ಸಾಗಾಟ ವೆಚ್ಚ, ಕಠಾವು ವೆಚ್ಚ ಎಫ್‌ಆರ್‌ಪಿಯಲ್ಲಿ ತೆಗೆದು ಹಾಕಿ ಪ್ರತಿ ಟನ್‌ಗೆ 3,550 ರೂ. ಕೊಡಬೇಕು. ಇದರಲ್ಲಿ ಯಾವುದೇ ವೆಚ್ಚವನ್ನು ಇದರಲ್ಲಿ ಸೇರಿಸಬಾರದು. ಕಬ್ಬು ಉಪ ಉತ್ಪನ್ನಗಳ ಲಾಭಾಂಶವನ್ನು ಕೊಡಬೇಕು. ಮಹಾರಾಷ್ಟ್ರದಲ್ಲಿ ಪ್ರತಿ ಟನ್‌ಗೆ 3,600 ರೂ., ಗುಜರಾತ್‌ನಲ್ಲಿ 4,000 ರೂ. ನೀಡಲಾಗುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ತಲಾ 1,000 ರೂ. ಬೆಂಬಲ ಬೆಲೆ ಕೊಡಬೇಕು.

