ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

Public TV
3 Min Read
ranu mondal

ನವದೆಹಲಿ: ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಅಂಗಳಕ್ಕೆ ಹಾರಿದ ವೈರಲ್ ಸಿಂಗರ್ ರಾನು ಮೊಂಡಲ್ ಈಗ ಸಖತ್ ಫೇಮಸ್. ಇಷ್ಟು ದಿನ ಒಂಟಿಯಾಗಿದ್ದ ರಾನು ಅವರು ವೈರಲ್ ಆಗುತ್ತಿದ್ದಂತೆ ಮಗಳು ಅವರನ್ನು ಭೇಟಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ತಾಯಿ ಹೆಸರು ಗಳಿಸಿದ ಬಳಿಕ ಅವರ ಬಳಿಗೆ ಮಗಳು ಬಂದಿದ್ದಾಳೆ ಎಂದವರಿಗೆ ರಾನು ಪುತ್ರಿ ತಿರುಗೇಟು ನೀಡಿದ್ದಾರೆ.

ಮಾಧ್ಯಮವೊಂದು ರಾನು ಪುತ್ರಿ ಎಲಿಜಬೆತ್ ಸಾಥಿ ರಾಯ್ ಅವರ ಸಂದರ್ಶನ ಮಾಡಿದಾಗ ತಾಯಿ ಬಗ್ಗೆ ಮಾತನಾಡಿ, ನನ್ನ ತಾಯಿ ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಈ ಹಿಂದೆ ಸಾಕಷ್ಟು ಬಾರಿ ನಾನು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ನನ್ನ ಪತಿ ನನ್ನ ಜೊತೆ ಇಲ್ಲ. ನಾನು ಚಿಕ್ಕ ಅಂಗಡಿ ಇಟ್ಟುಕೊಂಡು ಮಗುವೊಂದಿಗೆ ಜೀವನ ನಡೆಸುತ್ತಿದ್ದೇನೆ. ನನ್ನ ಬದುಕು ಸಾಗಿಸುವುದೆ ಕಷ್ಟವಿದೆ. ಆದರಲ್ಲೂ ನಾನು ನನ್ನ ತಾಯಿಯನ್ನು ಆಗಾಗ ನೋಡಲು ಬರುತ್ತಿದ್ದೆ. ಸಾಕಷ್ಟು ಬಾರಿ ನನ್ನ ಜೊತೆಯೇ ಇರು ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿರಲಿಲ್ಲ. ಆಗಾಗ ನಾನು ತಾಯಿಗೆ ಹಣವನ್ನು ಹಾಗೂ ತಿನ್ನಲು ಆಹಾರವನ್ನು ಕೊಂಡೊಯ್ಯುತ್ತಿದ್ದೆ ಎಂದರು. ಇದನ್ನು ಓದಿ:ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

ranu mandal

ನನ್ನ ತಾಯಿ ಎರಡು ಮದುವೆಯಾಗಿದ್ದಾರೆ. ನಾನು ಅವರ ಮೊದಲ ಪತಿಯ ಮಗಳು, ನನಗೆ ಓರ್ವ ಸಹೋದರ ಕೂಡ ಇದ್ದಾನೆ. ಅವರ ಎರಡನೇ ಗಂಡನಿಗೆ ಎರಡು ಮಕ್ಕಳಿದ್ದಾರೆ. ಒಟ್ಟು 4 ಮಕ್ಕಳಿದ್ದೇವೆ. ಆದರೆ ಎಲ್ಲರೂ ಕೂಡ ನನ್ನನ್ನು ಮಾತ್ರ ದೂಷಿಸುತ್ತಿದ್ದಾರೆ. ಉಳಿದ ಮಕ್ಕಳನ್ನು ಯಾಕೆ ಯಾರು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಲವು ವರ್ಷಗಳ ಹಿಂದೆಯಷ್ಟೆ ನನ್ನ ತಂದೆ ತೀರಿಹೋದರು. ಆದರೆ ಅಮ್ಮನ ಎರಡನೇ ಪತಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಎರಡನೇ ಪತಿಯ ಮಕ್ಕಳು ಮುಂಬೈನಲ್ಲಿ ವಾಸವಿದ್ದಾರೆ. ಅವರು ಯಾಕೆ ಅಮ್ಮನನ್ನು ನೋಡಲು ಬಂದಿಲ್ಲ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ:ರಾನು ಕಂಠದಲ್ಲಿ ಮತ್ತೊಂದು ಹೊಸ ಹಾಡು ತಂದ ಹಿಮೇಶ್

ಅವರು ಬೀದಿಯಲ್ಲಿ ಹಾಡಿ, ಜೀವನ ನಡೆಸುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ. ಅವರನ್ನು ರಣಘಾಟ್‍ನ ಅಮ್ರಾ ಶೋಬಾಯಿ ಶೊಯ್ತಾನ್ ಕ್ಲಬ್ ಅವರು ನೋಡಿಕೊಳ್ಳುತ್ತಿದ್ದರು. ನನ್ನ ಸಹೋದರರು ಕೂಡ ಈ ಕ್ಲಬ್ ಸದಸ್ಯರಾಗಿದ್ದರು. ಅವರೇ ಅಮ್ಮನನ್ನು ಕ್ಲಬ್‍ನಲ್ಲಿ ನೋಡಿಕೊಳ್ಳುತ್ತಿದ್ದರು. ಅವರು ನನಗೆ ಅಮ್ಮನನ್ನು ಭೇಟಿಯಾಗಲು ಬಿಡುತ್ತಿರಲಿಲ್ಲ. ಫೋನ್ ಮಾಡಿದ್ದರು ಕೂಡ ಮಾತನಾಡಲು ಕೊಡುತ್ತಿರಲಿಲ್ಲ. ಅಮ್ಮನ ಜೊತೆ ಮಾತನಾಡಲು ಪ್ರಯತ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದರು. ಆದ್ದರಿಂದ ನಾನು ಅಮ್ಮನಿಂದ ದೂರವಿದ್ದೆ. ಬಳಿಕ ಅಮ್ಮ ಬಗ್ಗೆ ಏನು ಮಾಹಿತಿ ಇರಲಿಲ್ಲ ಎಂದು ಆರೋಪಿಸಿದರು.

ranu mondal new 1

ಈಗ ಅಮ್ಮನಿಗೆ ಹಣ, ಹೆಸರು ಬರುತ್ತಿರುವುದಕ್ಕೆ ಅವರು ನನ್ನನ್ನು ಮತ್ತೆ ಅಮ್ಮನಿಂದ ದೂರ ಮಾಡುತ್ತಿದ್ದಾರೆ. ಅಮ್ಮನಿಗೆ ನನ್ನ ಬಗ್ಗೆ ತಪ್ಪಾಗಿ ಹೇಳಿ ತಲೆಕೆಡಿಸುತ್ತಿದ್ದಾರೆ. ಇಬ್ಬರು ಸೇರಿ ಇತ್ತೀಚೆಗೆ ತಾಯಿಯ ಬ್ಯಾಂಕ್ ಖಾತೆಯಿಂದ 10 ಸಾವಿರ ತೆಗೆದುಕೊಂಡಿದ್ದಾರೆ. ಮನೆಗೆ ಸಾಮಾಗ್ರಿ ತಂದು ಕೊಡುವುದಾಗಿ ಅಮ್ಮನ ಬಳಿ ಹಣ ಪಡೆದು, ಆಕೆಗೆ 4 ಜೊತೆ ಬಟ್ಟೆ, ಬ್ಯಾಗ್ ತಂದು ಕೊಟ್ಟು, ಉಳಿದ ಹಣವನ್ನು ತಾವೇ ಖಾಲಿ ಮಾಡಿದ್ದಾರೆ. ಎಲ್ಲರು ನನ್ನನ್ನೇ ದೂಷಿಸುತ್ತಿದ್ದಾರೆ. ಆದರು ಕೂಡ ನಾನು ಅಮ್ಮನಿಗೆ ಬೆಂಬಲ ನೀಡುತ್ತೇನೆ. ಅವರ ಮಧುರ ಧ್ವನಿಯ ಮೂಲಕ ಅವಕಾಶವನ್ನು ಅವರೇ ಗಿಟ್ಟಿಸಿಕೊಂಡಿದ್ದಾರೆ. ಅವರ ಮಗಳೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತೆ ಎಂದರು.

ಈಗಲೂ ನಾನು ನಮ್ಮ ಮನೆಗೆ ಬಾ, ನನ್ನ ಜೊತೆ ಇರು ಎಂದು ಅಮ್ಮನಿಗೆ ಹೇಳುತ್ತಿದ್ದೇನೆ ಆದರೆ ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಅವರನ್ನು ನಾನು ಒತ್ತಾಯ ಮಾಡಲ್ಲ. ಅವರಿಗೆ ಇಷ್ಟವಿದ್ದರೆ ನನ್ನ ಜೊತೆಯಲ್ಲಿ ಇರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಎಲಿಜಬೆತ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *