ವಿಜಯಪುರ: ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿರುವುದಕ್ಕೆ ಸಾಕ್ಷಿ ಕೇಳುತ್ತಿರುವ ಪ್ರತಿಪಕ್ಷ ನಾಯಕರನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದು, ದಾಳಿ ನಡೆದ ಸ್ಥಳಕ್ಕೆ ಬಿಟ್ಟುಬನ್ನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಹಾಗೂ ಭಾರತೀಯ ವಾಯುಪಡೆಯು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಆದ್ರೆ ಈ ಏರ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುವವರನ್ನು ದಾಳಿ ನಡೆದ ಸ್ಥಳದಲ್ಲಿ ಒಯ್ದು ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ. ಅಲ್ಲಿಯೇ ಎಷ್ಟು ಜನ ಮೃತಪಟ್ಟರು, ಯಾವ ಬಾಂಬ್ ಹಾಕಲಾಗಿದೆ ಅಂತ ನೋಡಿ ಬರಲಿ ಎಂದು ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ದೆಹಲಿ ಸಿಎಂ ಕೇಜ್ರೀವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಹೆಸರು ಹೇಳಿ ಪ್ರತಿಪಕ್ಷ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಭಾರತೀಯರು ಆಟದಲ್ಲಿ ಗೆದ್ದಾಗ ಅಥವಾ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ? ಸೀತಾರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಸಿಎಂಗೆ ತಿರುಗೇಟು ನೀಡಿದರು.
ಈಗ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ನೋಡುತ್ತಿರಿ ಕಾಂಗ್ರೆಸ್ ಜೆಡಿಎಸ್ ಮನೆ ಖಾಲಿಯಾಗಲಿವೆ ಎಂದು ಮೈತ್ರಿ ಸರ್ಕಾರದ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv