ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕರೂ ಆಗಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಇನ್ನೂ 24 ಗಂಟೆ ಬಾಕಿ ಉಳಿದಿದೆ. ಈ ನಡುವೆ ದೆಹಲಿಯ ಸಿಎಂ ಗದ್ದುಗೆಗೆ ಪೈಪೋಟಿ ಶುರುವಾಗಿದೆ.
ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ (Liquor Policy Case) ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೇ ಸೆಪ್ಟೆಂಬರ್ 13ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆ ಬಳಿಕ ಮೊದಲ ಭಾಷಣ ಮಾಡಿದ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದರು. ಅಲ್ಲದೇ ಜನತೆ ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ನಡುವೆ ಆಪ್‌ನಲ್ಲೇ ಇರುವ ದಿಗ್ಗಜ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.
ಸದ್ಯ ಸಿಎಂ ರೇಸ್‌ನಲ್ಲಿ ಸಚಿವೆ ಅತಿಶಿ (Atishi), ಮೂರು ಬಾರಿ ಶಾಸಕರಾಗಿರುವ ಸೌರಭ್ ಭಾರದ್ವಾಜ್, ರಾಘವ್ ಛಡ್ಡಾ, ಕೈಲಾಶ್ ಗೆಹ್ಲೋಟ್ ಹಾಗೂ ಸಂಜಯ್ ಸಿಂಗ್ ಅವರ ಹೆಸರು ಕೇಳಿಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ದೆಹಲಿಗೆ ನೂತನ ಸಿಎಂ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: Viral Video | ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸೇನೆ ನಡುವೆ ಗುಂಡಿನ ಚಕಮಕಿ – ರಕ್ಷಣೆಗಾಗಿ ಓಡಿದ ಭಯೋತ್ಪಾದಕ!
2025ರ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ:
ಮುಂದಿನ ನವೆಂಬರ್‌ನಲ್ಲೇ ಮಹಾರಾಷ್ಟ್ರ ಚುನಾವಣೆಯ ಜೊತೆಗೆ ದೆಹಲಿ ಚುನಾವಣೆ ನಡೆಸುವಂತೆ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದ್ರೆ ಆಯೋಗ ಮನವಿ ತಿರಸ್ಕರಿಸಿದ್ದು, 2025ರ ಫೆಬ್ರವರಿಯಲ್ಲಿ ದೆಹಲಿಯ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ನಡುವೆ ಮಾತನಾಡಿರುವ ಸಿಎಂ ಕೇಜ್ರಿವಾಲ್, ಮಾಡಿ ಡಿಸಿಎಂ ಮನೀಶ್ ಸಿಸೋಡಿಯಾ ಅವರೊಂದಿಗೆ ನಾನು ಜನರ ಬಳಿಗೆ ಹೋಗುತ್ತೇನೆ. ಜನರ ತೀರ್ಪು ಪಡೆದ ನಂತರವೇ ಕಚೇರಿಗೆ ಮರಳುತ್ತೇನೆ ಎಂದು ಗುಡುಗಿದ್ದಾರೆ. ಇದನ್ನೂಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್ ಕೇಜ್ರಿವಾಲ್!
ಕೇಸ್ ಹಾಕಿದ್ರೆ ರಾಜೀನಾಮೆ ಕೊಡಬೇಡಿ:
ಭಾನುವಾರ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್, ಪ್ರಜಾಪ್ರಭುತ್ವ ಉಳಿಸುವ ಉದ್ದೇಶದಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ ಎಂದ ಅವರು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಉಲ್ಲೇಖಿಸಿದ್ದರು. ನಾನು ಬಿಜೆಪಿಯೇತರರಿಗೆ ಮನವಿ ಮಾಡಲು ಬಯಸುತ್ತೇನೆ, ಅವರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ. ಇದು ಅವರ ಹೊಸ ಆಟ ಎಂದು ಕರೆ ನೀಡಿದ್ದರು.
ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚು ಸರ್ವಾಧಿಕಾರಿ ಆಡಳಿತವಾಗಿದೆ. ಕೇಂದ್ರ ಸರ್ಕಾರ ಏನೇ ಪಿತೂರಿ ಮಾಡಿದರೂ ನಮ್ಮ ಸಂಕಲ್ಪ ಮುರಿಯಲು ಸಾಧ್ಯವಿಲ್ಲ, ರಾಷ್ಟ್ರಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್