ಉಡುಪಿ: ಸರ್ಕಾರಿ ದುಡ್ಡಿನಲ್ಲಿ ಸಾಧನಾ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಸರ್ಕಾರಿ ಕಾರ್ಯಕ್ರಮದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಬಂದಿದೆ ಎಂದು ಮಾಧ್ಯಮಗಳು ಉಪ್ಪೂರಿನಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನರೇಂದ್ರ ಮೋದಿ ವಿದೇಶದಲ್ಲಿ ಯಾರ ದುಡ್ಡಲ್ಲಿ ಸುತ್ತುತ್ತಾರೆ? ಮೋದಿ ಸ್ವಂತ ದುಡ್ಡಲ್ಲಿ ಓಡಾಡ್ತಾರಾ? ನಾವು ಸರ್ಕಾರಿ ಕಾರ್ಯಕ್ರಮಕ್ಕೆ ಓಡಾಟ ಮಾಡ್ತೇವೆ ಎಂದು ಹೇಳಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ
ಅಮಿತ್ ಶಾಗೆ ಗಢಗಢ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸೋಲಿನ ಭಯ ಶುರುವಾಗಿದೆ. ಉಪಚುನಾವಣೆಯಲ್ಲೇ ರಾಜ್ಯದ ದಿಕ್ಸೂಚಿ ಬಗ್ಗೆ ಅವರಿಗೆ ಅರಿವಾಗಿದೆ. ನಮ್ಮ ರಾಜ್ಯದಲ್ಲಿ ಅಮಿತ್ ಶಾ ಯಾವ ತಂತ್ರವೂ- ರಣತಂತ್ರವೂ ನಡೆಯಲ್ಲ. ಅಮಿತ್ ಶಾ ಎಷ್ಟು ಬೇಕಾದ್ರು ಗೌಪ್ಯ ಸಭೆ ಮಾಡಲಿ. ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿ. ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಪ್ತರ ಮೇಲೆ ಐಟಿ ದಾಳಿ: ನನ್ನ ಆತ್ಮೀಯರನ್ನು, ಆಪ್ತರನ್ನು ಹುಡುಕಿ ಹುಡುಕಿ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡ್ತಿದ್ದಾರೆ. ಮೊನ್ನೆ ಲೋಹಿಯಾ ಸಂಘದ ಮುಖಂಡ ಶಿವಣ್ಣ ಮನೆಗೆ ಕೂಡಾ ದುರುದ್ದೇಶದಿಂದ ಐಟಿ ದಾಳಿಯಾಗಿದೆ. ಜನ ಎಲ್ಲವನ್ನು ನೋಡಿಕೊಳ್ತಾರೆ ಎಂದರು. ಇದನ್ನೂ ಓದಿ:ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!
ದೇವೇಗೌಡರಿಗೂ ಟಾಂಗ್: ಇದೇ ವೇಳೆ 2018 ವಿಧಾನಸಭಾ ಚುನಾವಣೆಯಲ್ಲಿ ನಾವೇನು ಮಾಡ್ತೇವೆ ನೋಡಿ ಅಂತ ಸಿಎಂಗೆ ಟಾಂಗ್ ಕೊಟ್ಟಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ಕೊಟ್ಟ ಅವರು, ದೇವೇಗೌಡರನ್ನು ಬಹಳ ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ದೇವೇಗೌಡರು ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಪದೇ ಪದೇ ಅವರು ತೋರಿಸೋದಕ್ಕೆ ಏನಿದೆ? ಅವರ ಜೊತೆಗಿದ್ದೂ ಬಹಳ ನೋಡಿದ್ದೇನೆ. ವಿರೋಧ ಪಕ್ಷದಲ್ಲಿದ್ದೂ ಎಲ್ಲಾ ನೋಡಿದ್ದೇನೆ. ಇನ್ನು ಗೌಡರದ್ದು ನೋಡುವಂತಹದ್ದು ಏನಿಲ್ಲ. ಜೆಡಿಸ್ ಎಲ್ಲೂ ಗೆಲ್ಲಲ್ಲ ಎಂದು ಹೇಳಿದರು. ಇದನ್ನೂ ಓದಿ: 3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
ಸುರೇಶ್ ಕುಮಾರ್ ಟೀಕೆ: ಸರ್ಕಾರಿ ಖರ್ಚಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಡೆಸುತ್ತಿರುವ “ಸಾಧನಾ ಸಮಾವೇಶ” ಕೇವಲ ರಾಜಕೀಯ ವಿರೋಧಿಗಳನ್ನು ಯದ್ವಾತದ್ವಾ ಬೈಯುವ ಅಸಹ್ಯ ಸಮಾವೇಶಗಳಾಗಿಬಿಟ್ಟಿದೆ ಎಂದು ಮಾಜಿ ಮುಖಂಡ, ಬೆಂಗಳೂರಿನ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಫೇಸ್‍ಬುಕ್ ನಲ್ಲಿ ಜನವರಿ 5 ರಂದು ಬರೆದುಕೊಂಡಿದ್ದರು.
ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಬೇಲೂರು ಪಟ್ಟಣಗಳಲ್ಲಿ ನಡೆಸಿದ ಸರಕಾರಿ ಖರ್ಚಿನ ಸಾಧನಾ ಸಮಾವೇಶ ಗಳಲ್ಲಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿದ ಸಿದ್ದರಾಮಯ್ಯನವರ ಭಾಷಣದಲ್ಲಿ ವಿರೋಧಿಗಳ ಬಗ್ಗೆ ಕೇವಲ ಏಕವಚನದ ಅಟ್ಟಹಾಸದ ಮಾತುಗಳೇ ಎದ್ದು ಕಾಣುತ್ತಿತ್ತು. ವಿಧಾನಸಭೆಯ ಅಧಿವೇಶನದಲ್ಲಿ ಸದಸ್ಯರಿಗೆ ಕನ್ನಡದ ವ್ಯಾಕರಣದ ಪಾಠ ಹೇಳುವ `ಸಂಧಿ’ ಎಂದರೆ ಏನು ಎಂದು ವಿವರವಾಗಿ ತಿಳಿಸುವ ಈ ಮೇಸ್ಟ್ರಿಗೆ ಪಾಪ “ಏಕವಚನ, ಬಹುವಚನ” ಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಅಷ್ಟೇ ಅಲ್ಲ. ಜೆಡಿಎಸ್ ನಾಯಕರ ವಿರುದ್ಧವೂ ಸರ್ಕಾರಿ ಖರ್ಚಿನಲ್ಲಿ ಬೈದಿದ್ದಾರೆ. ಅದಕ್ಕೋಸ್ಕರ ಬೇಲೂರಿನಲ್ಲಿ ಜೆಡಿಎಸ್ ಜನಪ್ರತಿನಿಧಿಗಳು ಈ ಉದ್ಧಟತನದ ವಿರುದ್ಧ ಪ್ರತಿಭಟಿಸಿ, ಧಿಕ್ಕಾರ ಕೂಗಿ ಸಮಾವೇಶದಿಂದ ಹೊರಬಂದಿದ್ದಾರೆ. ಅಂದ ಹಾಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ `ಮಾನ ಮರ್ಯಾದೆ’ ಇಲ್ಲ. ಎಂದಿರುವ ಸಿದ್ದರಾಮಯ್ಯನವರಿಗೆ ಸರ್ಕಾರಿ ಕಾರ್ಯಕ್ರಮಗಳನ್ನು ಈ ರೀತಿ ಏಕ ವಚನದ ಮೂಲಕ ದುರುಪಯೋಗ ಪಡಿಸಿಕೊಂಡ ಮೇಲೂ “ಮಾನ ಮರ್ಯಾದೆ ಇದೆ” ಎಂದು ನಾವು ಭಾವಿಸಬೇಕೆ ಎಂದು ಬರೆದುಕೊಂಡಿದ್ದರು.
ಉಡುಪಿಯ ಬೈಂದೂರಿನಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಸಾಧನಾ ಸಮಾವೇಶ ನಡೆದಿತ್ತು. ಈ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವಾಚಾರ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆಯೇ ಕಲ್ಲಡ್ಕ ಶಾಲೆಗೆ ದೇವಸ್ಥಾನದ ಊಟ ರದ್ದು ಮಾಡಿದ್ದಾರೆ. ಆದ್ರೆ ಸಿಎಂ ಕಾರ್ಯಕ್ರಮಕ್ಕೆ ದೇವಸ್ಥಾನದಿಂದ ಊಟ ತರಿಸಿದ್ದಾರೆಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ, “ದೇವಸ್ಥಾನದ ಊಟವನ್ನು ಸಮಾವೇಶಕ್ಕೆ ನೀಡಬಹುದು. ಇದು ದೇವಸ್ಥಾನದ ಪ್ರಸಾದ. ಸರ್ಕಾರಿ ಕಾರ್ಯಕ್ರಮಕ್ಕೆ ನೀಡಲು ಅವಕಾಶ ಇದೆ. ಆದಾಗ್ಯೂ ಹೊರೆಯಾಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡು ದಿನದ ಹಿಂದೆಯೇ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿತ್ತು.ಇದನ್ನೂ ಓದಿ:ಬಿಜೆಪಿಯವರನ್ನ ಅಣಕಿಸಲು ಮೋದಿ ಸ್ಟೈಲಲ್ಲಿ ಭಾಷಣ ಮಾಡಿದ ಸಿಎಂ
ಈ ಕುರಿತು ಸಚಿವ ಡಿವಿ ಸದಾನಂದ ಗೌಡರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಡಿಕಾರಿದ್ದು, ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ ಹಾಕಿದ ಹಣದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಬಡ ಮಕ್ಕಳಿಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ, ಅದೇ ದುಡ್ಡಲ್ಲಿ ರಾಜಕೀಯ ಕಾರ್ಯಕ್ರಮದ ಊಟಕ್ಕೆ ಉಪಯೋಗಿಸಿದ್ದು ವಿಪರ್ಯಾಸ. ಅದಕ್ಕೆ ಸಮರ್ಥನೆ ಬೇರೆ ಕೇಡು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದರು.