-ಅವರ ಅಪ್ಪಣೆ ತೆಗೆದುಕೊಳ್ಳಬೇಕಾ?
-ಶಾಸಕ ಜಮೀರ್‍ಗೆ ಸಿಎಂ ಖಡಕ್ ವಾರ್ನಿಂಗ್
ಬೆಂಗಳೂರು: ನಾವು ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಅಂತ ಕೇಳಲು ಜಮೀರ್ ಅಹ್ಮದ್ ಯಾರು? ಸರ್ಕಾರ ಮಾಡುವ ಕೆಲಸಗಳಿಗೆ ಅವರ ಅಪ್ಪಣೆ ಪಡೆದುಕೊಂಡು ಹೋಗಬೇಕಾ? ಈ ತರಹದ ಹೇಳಿಕೆ ಕೊಡಲು ಅವರು ಏನು ಸಂಬಂಧ? ಈ ರೀತಿಯ ಹೇಳಿಕೆ ಕೊಡೊದನ್ನ ನೋಡಿದ್ರೆ ಇದಕ್ಕೆಲ್ಲ ರಾಜ್ಯದ ಜನತೆ ಅವರೇ ಪ್ರಚೋದನೆ ನೀಡ್ತಿದ್ದಾರೆ ಅಂತಾ ಅರ್ಥೈಸಿಕೊಳ್ಳಬೇಕಾ? ತಪ್ಪು ಮಾಡಿದವ್ರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಅಂತ ಹೇಳಬೇಕಾದ ವ್ಯಕ್ತಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಜಮೀರ್ ಅಹ್ಮದ್ ವಿರುದ್ಧ ಸಿಎಂ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು, ಆರೋಗ್ಯಾಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಮೇಲೆ ಗೂಂಡಾಗಿರಿ ನಡೆಸಿ, ಸೀಲ್‍ಡೌನ್ ಗಾಗಿ ಹಾಕಿದ್ದ ಶೆಡ್ ಗಳನ್ನು ಧ್ವಂಸಗೊಳಿಸಿರೋದನ್ನ ಸಹಿಸಲ್ಲ. ಅಲ್ಲಿರುವ ತಾತ್ಕಾಲಿಕ ಚೆಕ್‍ಪೋಸ್ಟ್ ಗಳನ್ನು ಧ್ವಂಸಗೊಳಿಸಿರೋದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಜೀವನ ರಕ್ಷಿಸಲು ಹೋದವರ ಮೇಲೆಯೇ ಹಲ್ಲೆಗೆ ಯತ್ನಿಸಿರೋದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಗೃಹಸಚಿವರ ಜೊತೆಯೂ ಚರ್ಚಿಸಿದ್ದು, ಕಾನೂನು ರೀತಿ ಕಠಿಣ ಕ್ರಮಗಳನ್ನು ಜರುಗಿಸುವಂತೆ ಆದೇಶಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಹಿಂದೆಂದೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಅನ್ನೋ ಪ್ರಶ್ನೆಯೇ ಉದ್ಭವಿಸಲ್ಲ. ಕಾನೂನು ಕೈಗೆ ತೆಗೆದುಕೊಂಡುವರು ಯಾರೇ ಇರಲಿ, ಅವರಿಗೆ ಶಿಕ್ಷೆ ಆಗಬೇಕು ಎಂದರು.