ಬೆಂಗಳೂರು: ನೇಪಾಳದಲ್ಲಿ (Nepal) ಸರ್ಕಾರ ಪತನ ಆಗಿದ್ದು, ಮಧ್ಯಂತರ ಸರ್ಕಾರದ ರಚನೆಗೆ ತಯಾರಿ ನಡೆಯುತ್ತಿದೆ. ಪಿಎಂ ರೇಸ್‌ನಲ್ಲಿ ಬಲೇನ್ ಶಾ ಹೆಸರು ಮುನ್ನೆಲೆಗೆ ಬಂದಿದೆ. ಇವರು ಬೆಂಗಳೂರಿನ (Bengaluru) ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಜೆನ್ ಝೀ (Gen Z) ಯುವಕರ ಕಿಚ್ಚಿಗೆ ನೇಪಾಳ ಉದ್ವಿಗ್ನಗೊಂಡಿದೆ. ಬೆಂಕಿಯಲ್ಲಿ ಬೆಂದ ನೇಪಾಳದಲ್ಲಿ ಕೆಪಿ ಶರ್ಮಾ ಓಲಿ ಸರ್ಕಾರ ಪತನಗೊಂಡಿದೆ. ಮಧ್ಯಂತರ ಸರ್ಕಾರ ರಚನೆಯ ತಯಾರಿ ನಡೆಯುತ್ತಿದ್ದು, ಈ ನಡುವೆ ಯುವ ನಾಯಕ ಬಲೇನ್ ಶಾ ಹೆಸರು ಮುನ್ನೆಲೆಗೆ ಬಂದಿದೆ. ಈ ಬಲೇನ್ ಶಾ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ 2016 ರಿಂದ 2018ರ ಅವಧಿಯಲ್ಲಿ ಎರಡು ವರ್ಷ ಎಂಟೆಕ್ ವ್ಯಾಸಂಗ ಮಾಡಿದ್ದಾರೆ. ಪ್ರಧಾನಿ ರೇಸ್‌ನಲ್ಲಿ ಅವರ ಹೆಸರು ಕೇಳಿ ಕಾಲೇಜಿನ ಆಡಳಿತ ಮಂಡಳಿ, ಪಾಠ ಮಾಡಿದ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ
ಬಲೇನ್ ಶಾ ಕ್ಲಾಸಿನಲ್ಲಿ ಚುರುಕಾಗಿದ್ದರಂತೆ. ರ‍್ಯಾಪ್ ಮ್ಯೂಸಿಕ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು, ತರಗತಿಯಲ್ಲಿ 10ಕ್ಕೆ 9.43ರಷ್ಟು ಅಂಕ ಪಡೆದಿದ್ದರಂತೆ. 2018 ರಲ್ಲಿ ಎಂ ಟೆಕ್ ಕೋರ್ಸ್ ಮುಗಿಸಿ, 2022 ರಲ್ಲಿ ಕಂಠ್ಮಂಡು ಮೇಯರ್ ಆಗಿದ್ದಾರೆ. ಈ ವೇಳೆ ಕಾಲೇಜಿನಿಂದ ಅಭಿನಂಧನಾ ಪತ್ರ ಕಳುಹಿಸಲಾಗಿತ್ತಂತೆ. ಕಾಲೇಜಿನಲ್ಲಿ ಸಾಮಾನ್ಯ ವ್ಯಕ್ತಿಯಂತಿದ್ದ. ರಾಜಕೀಯದ ಆಸಕ್ತಿಯೂ ಇರಲಿಲ್ಲ. ಇವತ್ತು ಪ್ರಧಾನಿಯ ರೇಸ್‌ನಲ್ಲಿ ಹೆಸರು ಕೇಳಿದಾಗ ಖುಷಿಯಾಯ್ತು ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ. ಹೆಚ್.ಸಿ ನಾಗರಾಜ್ ಹೇಳಿದ್ದಾರೆ.
ನೇಪಾಳದ ಮೂವರು ಯುವಕರು ಪ್ರತ್ಯೇಕ ಕೋಟಾದಡಿ ಎಂ ಟೆಕ್‌ಗೆ ಪ್ರವೇಶ ಪಡೆದಿದ್ದರು. ಇದರಲ್ಲಿ ಬಲೇನ್ ಶಾ ಒಬ್ಬರು. ಮೇಯರ್ ಆದ ಬಳಿಕವೂ ಕಾಲೇಜಿನ ಅಲ್ಯೂಮಿನಿ ಮೀಟ್ ಗೆ ಆಹ್ವಾನಿಸಲಾಗಿತ್ತಂತೆ. ಕೆಲಸದ ಒತ್ತಡದಿಂದ ಬರಲು ಆಗಿರಲಿಲ್ಲವಂತೆ. ಈ ಬಾರಿ ಮತ್ತೆ ಆಹ್ವಾನ ಮಾಡ್ತೇವೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ. ಅದೇನೆ ಇರಲಿ ಎಂಟೊಂಬತ್ತು ವರ್ಷದ ಹಿಂದೆ ನಾಲ್ಕು ಗೋಡೆಗಳ ಮಧ್ಯೆಯ ಬೇಂಚುಗಳ ಮೇಲೆ ಕೂತು ಪಾಠ ಕೇಳ್ತಿದ್ದ ಯುವಕ ನೇಪಾಳದ ಪ್ರಧಾನಿ ಹುದ್ದೆಯ ರೇಸ್‌ನಲ್ಲಿರೋದನ್ನು ನೋಡಿ ಕಾಲೇಜಿನ ಆಡಳಿತ ಮಂಡಳಿ ಹೆಮ್ಮೆಪಟ್ಟಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್