ಉಡುಪಿ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೊಸ ರಾಜಕೀಯ ಪಕ್ಷವನ್ನು ಕಟ್ಟುವ ಘೋಷಣೆಯನ್ನು ಮಾಡಿದ್ದಾರೆ. ಭಷ್ಟ ರಾಜಕೀಯ ವ್ಯವಸ್ಥೆಯ ಒಳಗೆ ಹೊಕ್ಕಿ ಪೊಲೀಸಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಪಮಾ ಶೆಣೈ, ಸಮಾನ ಮನಸ್ಕರೊಂದಿಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇನೆ. ಒಂದು ತಿಂಗಳೊಳಗೆ ಅಭಿಪ್ರಾಯಗಳನ್ನು ಪಡೆದುಕೊಂಡು ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.
ಪೊಲೀಸಿಂಗ್ ಕೆಲಸ ಮಾಡುವಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡೋಣ ಎಂದು ಹೊರಟಿದ್ದೇನೆ. ಮೂರು ಧ್ಯೇಯಗಳಿವೆ. ಎಂಎಲ್‍ಎಗಳ ಗ್ರೂಪನ್ನು ತಯಾರು ಮಾಡಬೇಕೆಂದಿದ್ದೇನೆ. ರಾಜಕಾರಣಿಗಳು ವಿಧಾನಸೌಧದ ಒಳಗೆ ಪೊಲೀಸರ ಥರ ಕೆಲಸ ಮಾಡಬೇಕಾಗಿದೆ. ಒಂದಷ್ಟು ಎಂಎಲ್‍ಎ ಗಳು ಸರ್ಕಾರ ರಚಿಸುವ ಮತ್ತು ಉರುಳಿಸಲು ಶಕ್ತಿಯಿರುವವರಾಗಬೇಕು ಎಂದು ಹೇಳಿದರು.
Advertisement
ಕಿಂಗ್ ಮೇಕರ್ಸ್ ಪಾರ್ಟಿಗಳು ಆಗಬಾರದು. ಜನರು ಆ ಶಕ್ತಿಯನ್ನು ಹೊಂದಬೇಕು. ಬೇರೆ ರಾಜಕೀಯ ಪಕ್ಷದ ಜೊತೆ ಸೇರಲ್ಲ. ಕೆಲವು ಸೀಟುಗಳು ಚುನಾವಣೆಯಲ್ಲಿ ಬಂದರೆ ಯಾರಿಗೆ ಬೆಂಬಲಿಸುತ್ತೇವೆಂದು ಆಮೇಲೆ ಹೇಳುತ್ತೇವೆ ಎಂದರು. ಎಲ್ಲಾ ಅಂದುಕೊಂಡಂತೆ ಆದ್ರೆ ಬಳ್ಳಾರಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಲ್ಲೇ ನನಗೆ ಹೆಚ್ಚು ಜನರ ಬೆಂಬಲವಿದೆ ಎಂದು ಹೇಳಿದರು.
Advertisement
Advertisement
ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಭೇಟಿ ಮಾಡಿ ಮಾತನಾಡದ್ದೇನೆ. ರಾಜ್‍ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲ ದೂರು ನೀಡಿದ್ದೇನೆ. ಜನರ ದನಿಯಾಗುವ ಪಕ್ಷ ರಾಜ್ಯದಲ್ಲಿ ಇಲ್ಲ. ಅಧಿಕಾರಕ್ಕೆ ಬೆಂಬಲಿಸುವ- ಬೆಂಬಲ ವಾಪಾಸ್ ಪಡೆದರೆ ಸರ್ಕಾರ ಬೀಳುವ ರೀತಿಯ ಪಕ್ಷ ಕಟ್ಟುವ ಕನಸಿದೆ ಎಂದು ಅನುಪಮಾ ಶೆಣೈ ಹೇಳಿದರು. ಕೇಜ್ರಿವಾಲ್ ಅವರ ಹೆಸರನ್ನು ಎರಡು ಪಕ್ಷಗಳು ಕೆಡಿಸಿದೆ. ಆಪ್‍ಗೆ ಸೇರುವ ಸಾಧ್ಯತೆ ಕಮ್ಮಿ ಅಂದ್ರು.
Advertisement
ರಾಜೀನಾಮೆ ನೀಡಿದ ನಂತರ ಹಲವಾರು ಮಂದಿ ಭೇಟಿ ಮಾಡಿದ್ದರು. ಫೋನ್ ಮೂಲಕ ಮಾತನಾಡಿದ್ದರು ಹೊಸ ಪಕ್ಷದ ಬಗ್ಗೆಯೂ ಜನರೇ ಐಡಿಯಾ ಕೊಟ್ಟದ್ದು. ಗಾಂಧಿ ಜಯಂತಿ ದಿನವೇ ಮೊದಲ ಮೀಟಿಂಗ್ ಮಾಡಿದ್ದೇವೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಕನಸು ನನ್ನದು ಎಂದರು. ಪರಮೇಶ್ವರ್ ನಾಯ್ಕ್ ವಿರುದ್ಧ ಸ್ಪರ್ಧೆ ಮಾಡುತ್ತೇನೆ. ಜನ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆ ನಿರ್ಧಾರ ನಿಂತಿದೆ ಎಂದು ಹೇಳಿದರು. ಪತ್ರಕರ್ತರನ್ನು ಕೂಡಾ ಆಹ್ವಾನ ಮಾಡುತ್ತೇನೆ. ಮಾಧ್ಯಮ ಪ್ರಬಲವಾಗಿದೆ. ಮಾಧ್ಯಮದ ಮಂದಿಗೂ ಶಕ್ತಿ ತುಂಬುವ ಅವಶ್ಯಕತೆಯಿದೆ ಎಂದು ಹೇಳಿದರು.