ಕೊಲೆಸ್ಟ್ರಾಲ್, ಮಧುಮೇಹ ಉಳ್ಳವರಿಗೆ ಬೆಸ್ಟ್ ಅಡುಗೆ – ಗೋಧಿ ಬಳಸಿ ಮಾಡಿ ತರಕಾರಿ ಕಿಚಡಿ

Public TV
2 Min Read
Wheat And Vegetable Khichdi 2

ಕಿಚಡಿ ಯಾವಾಗಲೂ ಹೋಮ್ಲಿ ಅನುಭವ ನೀಡೋ ಅಡುಗೆ. ಬೆಳಗ್ಗಿನ ತಿಂಡಿಯಾಗಿ ಕಿಚಡಿ ಸವಿದರೆ ದಿನ ಪೂರ್ತಿ ಉತ್ಸಾಹದಿಂದಿರಲು ಇದು ಸಹಾಯ ಮಾಡುತ್ತದೆ. ನಾವಿಂದು ತಿಳಿಸಿಕೊಡುತ್ತಿರುವ ಗೋಧಿ ಹಾಗೂ ತರಕಾರಿ ಕಿಚಡಿಯೂ ಹಾಗೇ. ಇದನ್ನು ತಕ್ಷಣ ಹಾಗೂ ಸುಲಭವಾಗಿ ಮಾಡಬಹುದು. ಆದರೂ ರುಚಿ ಹಾಗೂ ಪೌಷ್ಟಿಕಾಂಶಕ್ಕೆ ಯಾವುದೇ ಕೊರತೆಯಿಲ್ಲ. ಕಿಚಡಿ ಮಾಡಲು ಅಕ್ಕಿ ಬದಲು ಇಲ್ಲಿ ಗೋಧಿ ಬಳಸುತ್ತಿರುವುದರಿಂದ ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಇರುವವರಿಗೆ ಇದು ಸೂಕ್ತವಾಗಿದೆ. ಗೋಧಿ ಬಳಸಿ ತರಕಾರಿಯ ಕಿಚಡಿ ಮಾಡೋದು ಹೇಗೆಂದು ನೋಡೋಣ.

Wheat And Vegetable Khichdi

ಬೇಕಾಗುವ ಪದಾರ್ಥಗಳು:
ಗೋಧಿ – ಅರ್ಧ ಕಪ್ (6 ಗಂಟೆ ನೆನೆಸಿಡಿ)
ಹೆಸರು ಬೇಳೆ – ಅರ್ಧ ಕಪ್ (20 ನಿಮಿಷ ನೆನೆಸಿಡಿ)
ಎಣ್ಣೆ – 1 ಟೀಸ್ಪೂನ್
ಕಾಳು ಮೆಣಸು – 2-3
ಲವಂಗ – 2
ದಾಲ್ಚಿನ್ನಿ ಚಕ್ಕೆ – 1 ಇಂಚು
ಜೀರಿಗೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ತೆಳ್ಳಗೆ ಕತ್ತರಿಸಿದ ಈರುಳ್ಳಿ – ಕಾಲು ಕಪ್
ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ಅರ್ಧ ಟೀಸ್ಪೂನ್
ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಕೊತ್ತಂಬರಿ, ಜೀರಿಗೆ ಪುಡಿ – ಒಂದೂವರೆ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

Wheat And Vegetable Khichdi 1

ಮಾಡುವ ವಿಧಾನ:
* ಮೊದಲಿಗೆ ನೆನೆಸಿಟ್ಟಿದ್ದ ಗೋಧಿಯನ್ನು ಬ್ಲೆಂಡರ್‌ಗೆ ಹಾಕಿ ಅರ್ಧ ಕಪ್ ನೀರು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಾಳುಮೆಣಸು, ಲವಂಗ, ದಾಲ್ಚಿನ್ನಿ ಚಕ್ಕೆ ಹಾಗೂ ಜೀರಿಗೆ ಹಾಕಿ ಹುರಿದುಕೊಳ್ಳಿ.
* ಜೀರಿಗೆ ಸಿಡಿದ ಬಳಿಕ ಹಿಂಗ್ ಹಾಕಿ ಮಧ್ಯಮ ಉರಿಯಲ್ಲಿ ಅರ್ಧ ನಿಮಿಷ ಹುರಿದುಕೊಳ್ಳಿ.
* ಬಳಿಕ ಈರುಳ್ಳಿ ಸೇರಿಸಿ 1-2 ನಿಮಿಷ ಬೇಯಿಸಿಕೊಳ್ಳಿ.
* ಈಗ ಹೆಚ್ಚಿದ ಮಿಶ್ರ ತರಕಾರಿಗಳನ್ನು ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ.
* ಈಗ ಒರಟಾಗಿ ರುಬ್ಬಿಕೊಂಡಿದ್ದ ಗೋಧಿ ಹಾಗೂ ನೆನೆಸಿಟ್ಟಿದ್ದ ಹೆಸರು ಬೇಳೆ ಸೇರಿಸಿ 1 ನಿಮಿಷ ಮಿಶ್ರಣ ಮಾಡಿ.
* ಉಪ್ಪು, ಅರಿಶಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಹಾಗೂ ಜೀರಿಗೆ ಪುಡಿ ಸೇರಿಸಿ, ಅದಕ್ಕೆ 3 ಕಪ್ ನೀರು ಹಾಕಿ ಮಿಶ್ರಣ ಮಾಡಿ.
* ಕುಕ್ಕರ್ ಮುಚ್ಚಳ ಹಾಕಿ 3 ಸೀಟಿ ಬರುವವರೆಗೆ ಕಿಚಡಿಯನ್ನು ಬೇಯಿಸಿಕೊಳ್ಳಿ.
* ಜಾಗರೂಕವಾಗಿ ಕುಕ್ಕರ್‌ನ ಮುಚ್ಚಳ ತೆಗೆದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗೋಧಿ ಹಾಗೂ ತರಕಾರಿ ಕಿಚಡಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

Share This Article