ನವದೆಹಲಿ: ಮಧ್ಯದ ಬೆರಳಿನ ಅಶ್ಲೀಲ ಎಮೋಜಿಯನ್ನು 15 ದಿನಗಳ ಒಳಗೆ ತೆಗೆದು ಹಾಕುವಂತೆ ದೆಹಲಿಯ ವಕೀಲರೊಬ್ಬರು ಮಂಗಳವಾರ ವಾಟ್ಸಪ್ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಮತ್ತೊಬ್ಬರಿಗೆ ಮಧ್ಯದ ಬೆರಳನ್ನು ತೋರಿಸುವುದು ಕಾನೂನುಬಾಹಿರ ಮಾತ್ರವಲ್ಲ, ಇದು ಅಶ್ಲೀಲ ಹಾಗೂ ಕೆಟ್ಟ ಸಂಜ್ಞೆ. ಭಾರತದಲ್ಲಿ ಇದು ಅಪರಾಧ ಎಂದು ದೆಹಲಿಯ ಸಿಟಿ ಕೋರ್ಟ್ ನಲ್ಲಿ ವಕೀಲರಾಗಿ ಅಭ್ಯಾಸ ಮಾಡ್ತಿರೋ ಗುರುಮೀತ್ ಸಿಂಗ್ ಹೇಳಿದ್ದಾರೆ.
ಐಪಿಸಿ ಸೆಕ್ಷನ್ 354 ಮತ್ತು 509ರ ಪ್ರಕಾರ, ಅಶ್ಲೀಲ, ಕೆಟ್ಟದಾದ ಹಾಗೂ ರೇಗಿಸುವಂತಹ ಸಂಜ್ಞೆಗಳನ್ನ ಮಹಿಳೆಯರಿಗೆ ತೋರಿಸುವುದು ಅಪರಾಧ. ಆದ್ದರಿಂದ ಅಶ್ಲೀಲ ಸಂಜ್ಞೆಯನ್ನು ಯಾರೇ ಬಳಸಿದರೂ ಅದು ಕಾನೂನುಬಾಹಿರ. ಅಲ್ಲದೆ 1994ರ ಕ್ರಿಮಿನಲ್ ಜಸ್ಟಿಸ್ ಆ್ಯಕ್ಟ್ ನ ಸೆಕ್ಷನ್ 6ರ ಪ್ರಕಾರ ಮಧ್ಯದ ಬೆರಳು ತೋರಿಸುವುದನ್ನು ಐರ್ಲೆಂಡಿನಲ್ಲಿ ಅಪರಾಧ ಎಂದು ಪರಿಗಣಿಸಲಾಗಿದೆ ಅಂತ ಸಿಂಗ್ ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ.
ವಾಟ್ಸಪ್ ಆ್ಯಪ್ ನಲ್ಲಿ ಮಧ್ಯದ ಬೆರಳಿನ ಎಮೋಜಿಯನ್ನು ಬಳಕೆದಾರರಿಗೆ ನೀಡುವ ಮೂಲಕ ನೀವು(ವಾಟ್ಸಪ್) ನೇರವಾಗಿ ಅಶ್ಲೀಲ ಸಂಜ್ಞೆಯ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ನೋಟಿಸ್ ನೀಡಲಾದ 15 ದಿನಗಳಲ್ಲಿ ವಾಟ್ಸಪ್ ಬಳಕೆದಾರರಿಗೆ ಲಭ್ಯವಿರುವ ಎಲ್ಲ ಮಾದರಿಯ ಮಧ್ಯದ ಬೆರಳಿನ ಎಮೋಜಿ, ಗ್ರಾಫಿಕ್ಸ್ ಮತ್ತು ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಗಿದೆ. ಒಂದು ವೇಳೆ ಎಮೋಜಿಯನ್ನು ತೆಗೆಯುವಲ್ಲಿ ವಿಫಲವಾದಲ್ಲಿ ಕಂಪೆನಿ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಯಾವುದೇ ಭಾವನೆ ಅಥವಾ ಚಿಂತನೆಯನ್ನು ವ್ಯಕ್ತಪಡಿಸಲು ಬಳಸುವ ಡಿಜಿಟಲ್ ಚಿತ್ರ ಅಥವಾ ಚಿಹ್ನೆಯನ್ನ ಎಮೋಜಿ ಅಂತಾರೆ.