ನವದೆಹಲಿ: ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಹಿನ್ನಲೆಯಲ್ಲಿ ಮೇ.3ರಂದು ನಡೆಸಲಾಗಿದ್ದ ನೀಟ್ 2026ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸೇರಿ ಪರೀಕ್ಷೆ ಬರೆದಿದ್ದ 25 ಲಕ್ಷ ವಿದ್ಯಾರ್ಥಿಗಳು ಕಣ್ಣೀರು ಹಾಕುವಂತಾಗಿದೆ. ಈಗಾಗಲೇ ಪರೀಕ್ಷೆ ಮುಗಿದು ಕೀ ಆನ್ಸರ್ ಕೂಡ ಬಂದ ಹಿನ್ನಲೆಯಲ್ಲಿ ತಮ್ಮ ಪುಸ್ತಕ ಹಾಗೂ ನೋಟ್ಸ್‌ಗಳನ್ನು ಜೂನಿಯರ್ ವಿದ್ಯಾರ್ಥಿಗಳಿಗೆ ಕೆಲವರು ನೀಡಿದ್ದರೆ, ಇನ್ನೂ ಹಲವರು ರದ್ದಿಗೆ ಹಾಕಿದ್ದರು. ಅಲ್ಲದೆ, ಹಲವರು ಈ ಬಾರಿಯ ಪೇಪರ್ ಸರಳವಾಗಿದ್ದು, ಹೆಚ್ಚಿನ ಅಂಕ ಬರು ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಏಕಾಏಕಿ ಪರೀಕ್ಷೆ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ಸಿದ್ದವಾಗಿರುವುದಕ್ಕೆ ಆಕ್ರೋಶವ್ಯಕ್ತವಾಗಿದೆ.
ಇನ್ನೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತನಿಖೆಯನ್ನ ಕೇಂದ್ರೀಯ ತನಿಖಾ ದಳ (CBI) ಹೆಗಲಿಗೇರಿಸಿದೆ. ಆದ್ರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಯಾವ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇದರ ಕುರಿತ ಮಾಹಿತಿ ಇಲ್ಲಿದೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆ, ವಂಚನೆ ಮತ್ತು ಅಕ್ರಮಗಳಿಂದ ರದ್ದಾಗಿವೆ. 2024ರ ನೀಟ್-ಯುಜಿ, ಯುಜಿಸಿ-ನೆಟ್, 2023ರ ಬಿಹಾರ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ, ಎಆಯ್‌ಆಯ್‌ಎಮ್‌ಎಸ್ ನರ್ಸಿಂಗ್ ನೇಮಕಾತಿ ಪರೀಕ್ಷೆ ಹಾಗೂ 2021ರ ರೀಟ್ ಮತ್ತು ಜೆಇಇ ಮೇನ್ ಪರೀಕ್ಷೆಗಳಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ 2024ರಲ್ಲಿ ʻಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆʼ ಜಾರಿಗೆ ತಂದಿದೆ. ಈ ಕಾಯ್ದೆಯ ಉದ್ದೇಶ ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ, ವಂಚನೆ ಮತ್ತು ಸಂಘಟಿತ ಅಕ್ರಮಗಳನ್ನು ತಡೆಯುವುದಾಗಿದೆ. ಈ ಕಾಯ್ದೆಯ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ವಂಚನೆಗೆ ಸಂಬಂಧಿಸಿದ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಶಿಕ್ಷೆಗಳೇನು?
* ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ವಂಚನೆ ನಡೆಸಿದವರಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
* ಜೊತೆಗೆ 10 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸುವ ಅವಕಾಶವೂ ಇದೆ.
* ಸಂಘಟಿತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಸಿದರೆ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
* ಇಂತಹ ಪ್ರಕರಣಗಳಲ್ಲಿ 1 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸುವ ಅವಕಾಶ ಕಾಯ್ದೆಯಲ್ಲಿ ಇದೆ.
ಈ ಕಾಯ್ದೆಯನ್ನು 2024ರ ಫೆಬ್ರವರಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ್ದು, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ.

