ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಈಚೆಗೆ ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿತ್ತು. ಇದೀಗ ಜಪಾನ್‌ನಲ್ಲಿ (Japan) ಅತ್ಯಂತ ಭಯಾನಕವಾದ ಮಾಂಸ ತಿನ್ನುವ ವೈರಸ್‌ವೊಂದು (Flesh Eating Bacteria) ಕಾಣಿಸಿಕೊಂಡಿದೆ. ಈ ವೈರಸ್‌ನಿಂದ ಭಾರತಕ್ಕೆ ಯಾವುದೇ ಆತಂಕ ಸದ್ಯಕ್ಕೆ ಇಲ್ಲ. ಆದ್ರೆ ನಿರ್ಲಕ್ಷ್ಯ ವಹಿಸಿದ್ರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಹೇಳುತ್ತಾರೆ.
2020-2021ರ ವೇಳೆಗೆ ಚೀನಾದ (China) ವುಹಾನ್ ಲ್ಯಾಬ್‌ವೊಂದರಲ್ಲಾದ ಯಡವಟ್ಟಿನಿಂದ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡಿತ್ತು. ಆದ್ರೆ ಇದಕ್ಕೂ ಮುನ್ನವೇ ಎಬೋಲಾ, ಮಾರ್ಬರ್ಗ್, ರೇಬಿಸ್ ಹಾಗೂ ಸಿಡುಬು, ಹಂಟಾ ದಂತಹ ವೈರಸ್‌ಗಳು ವಿಶ್ವವವನ್ನು ಕಾಡಿದ್ದವು. ಈ ಎಲ್ಲ ವೈರಸ್‌ಗಳಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಜಪಾನ್‌ನಲ್ಲಿ ಹುಟ್ಟಿಕೊಂಡ ವೈರಸ್‌ವೊಂದು ಜನರ ನಿದ್ದೆಗೆಡಿಸಿದೆ. ಮನುಷ್ಯನ ದೇಹದ ಮಾಂಸ ತಿನ್ನುವ ವೈರಸ್ ಇದಾಗಿದ್ದು, ಬೇರೆ ದೇಶಗಳಿಗೂ ಹರಡುವ ಆತಂಕ ಹುಟ್ಟಿಸಿದೆ. 2022ರಲ್ಲಿ ಕನಿಷ್ಠ 5 ಯುರೋಪಿಯನ್ ದೇಶಗಳಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ವೈರಸ್‌ಗೆ ಹೊಸ ಔಷಧಿಯನ್ನು ಕಂಡುಹಿಡಿಯುವತ್ತ ಚಿತ್ತ ಹರಿಸಿದ್ದಾರೆ.
Advertisement
Advertisement
ಹೌದು. ಮಾಂಸ ತಿನ್ನುವ ಬ್ಯಾಕ್ಟೀರಿಯಾ ಹೊಸ ಆತಂಕ ಸೃಷ್ಟಿಸಿದೆ. ಜಪಾನ್‌ನಲ್ಲಿ ಹರಡುತ್ತಿರುವ ಈ ಅಪರೂಪದ ಬ್ಯಾಕ್ಟೀರಿಯಾ, ಗಂಭೀರ ಕಾಯಿಲೆ ಉಂಟುಮಾಡುತ್ತಿದ್ದು, 48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುವಷ್ಟು ಅಪಾಯಕಾರಿಯಾಗಿದೆ. ಇದು ವೈದ್ಯಕೀಯ ಲೋಕಕ್ಕೆ ಹೊಸ ಸವಾಲೊಡ್ಡಿದೆ. ಕೋವಿಡ್ ಸಮಯದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜಪಾನ್‌ನಲ್ಲಿ ಇದು ಕಾಣಿಸಿಕೊಂಡಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಜಪಾನ್‌ನಲ್ಲಿ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಎಸ್‌ಟಿಎಸ್‌ಎಸ್ – Streptococcal Toxic Shock Syndrome) ಎಂಬ ಹೊಸ ವೈರಸ್ ಹುಟ್ಟಿಕೊಂಡಿದ್ದು, ಇದು ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡಿದೆ.
Advertisement
ಕಳೆದ ವರ್ಷ 941 ಪ್ರಕರಣಗಳು ದಾಖಲಾಗಿತ್ತು. ಆದ್ರೆ ಪ್ರಸಕ್ತ ವರ್ಷದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ 1,000ಕ್ಕೂ ಹೆಚ್ಚಿದೆ. ಈ ವರ್ಷಾಂತ್ಯಕ್ಕೆ ಇದರ ಸಂಖ್ಯೆ ಇನ್ನಷ್ಟು ದುಪ್ಪಟ್ಟಾಗಲಿದೆ ಎಂದು ತಜ್ಞ ವೈದ್ಯರು (Doctors) ಅಂದಾಜಿಸಿರುವುದಾಗಿ ಸಾಂಕ್ರಾಮಿಕ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆ ವರದಿ ಮಾಡಿದೆ.
Advertisement
ಅಷ್ಟಕ್ಕೂ ಈ ವೈರಸ್ ಹುಟ್ಟಿಕೊಂಡಿದ್ದು ಹೇಗೆ? ಇದರ ಅಪಾಯದ ತೀವ್ರತೆ ಎಷ್ಟು? ಇದು ಕೊರೊನಾದಂತೆ ವಿಶ್ವಕ್ಕೆ ವ್ಯಾಪಿಸುವ ಸಾಧ್ಯತೆ ಇದೆಯೇ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳೇನು?
ಈ ಕಾಯಿಲೆಯಲ್ಲಿ ಮರಣ ದರ ಶೇ.30ರಷ್ಟು ಇದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಗ್ರೂಪ್ ಎ ಸ್ಟ್ರೆಪ್ಟೋಕೊಕ್ಕಸ್ (GAS), ಮಕ್ಕಳಲ್ಲಿ ಸ್ಟ್ರೆಪ್ ಥ್ರೋಟ್ ಎಂದು ಕರೆಯಲಾಗುವ ಲಘು ಕಾಯಿಲೆಯನ್ನು ಉಂಟುಮಾಡುತ್ತದೆ. ಇದರಲ್ಲಿ ಗಂಟಲು ನೋವು ಮತ್ತು ಊದುವಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಅಂಗಾಂಗ ನೋವು, ಊತ, ಜ್ವರ ಹಾಗೂ 24 ರಿಂದ 48 ಗಂಟೆಯೊಳಗೆ ಕಡಿಮೆ ರಕ್ತದೊತ್ತಡದಂತಹ ಲಕ್ಷಣಗಳನ್ನು ತ್ವರಿತವಾಗಿ ಉಂಟುಮಾಡಬಹುದು. ಇದು ಜೀವಕೋಶಗಳ ಸಾವು, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಮುಖ್ಯವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಈ ವೈರಸ್ ಕಾಣಿಸಿಕೊಂಡ 48 ಗಂಟೆಗಳಲ್ಲಿ ಮನುಷ್ಯ ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಟೋಕಿಯೋ ಮಹಿಳಾ ವೈದ್ಯಕೀಯ ಕಾಲೇಜಿನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಪ್ರೊಫೆಸರ್ ಕೆನ್ ಕಿಕುಚಿ ತಿಳಿಸಿದ್ದಾರೆ.
ಚಿಕಿತ್ಸೆ ಏನು?
ಟಾಕ್ಸಿಕ್ ಶಾಕ್ ಸಿಂಡ್ರೋಮ್ ವೈರಸ್‌ಗೆ ನಿಖರ ಚಿಕಿತ್ಸೆ ಇಲ್ಲವಾದರೂ ತಾತ್ಕಾಲಿಕ ಚಿತ್ಸೆಗಾಗಿ ʻIV ʼ ಆಂಟಿಬಯೊಟಿಕ್ ಕಂಡುಹಿಡಿಯಲಾಗಿದೆ. ಇದು ರಕ್ತದೊತ್ತಡ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್ ವಿರುದ್ಧ ಹೋರಾಟುವ ಶಕ್ತಿ ಒದಗಿಸುತ್ತದೆ. ಅಲ್ಲದೇ ಅಂಗಾಗ ವೈಫಲ್ಯತೆ ಮತ್ತು ಪ್ರಾಣಹಾನಿಯಂತಹ ತೀವ್ರ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳುತ್ತದೆ.
ರೋಗ ನಿರ್ಣಯಿಸುವುದು ಹೇಗೆ?
ಅಪಾಯಕಾರಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ನಿರ್ಣಯಿಸಲು ಕೆಲವು ಪರೀಕ್ಷಾ ವಿಧಾನಗಳಿವೆ. ಮೊದಲನೆಯದ್ದಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಕಿಡ್ನಿ, ಕಡಿಮೆ ರಕ್ತದೊತ್ತಡ, ಪಿತ್ತಜನಕಾಂಗ ಸಮಸ್ಯೆಗಳಿರುವ ಬಗ್ಗೆ ಗುರುತಿಸಲಾಗುತ್ತದೆ. ಜೊತೆಗೆ ಅಂಗಾಗ ವೈಫಲ್ಯಗಳು ಕಂಡುಬಂದಿದ್ದರೆ ಆಗ ಕಾಯಿಲೆಗೆ ತುತ್ತಾಗಿರುವ ಬಗ್ಗೆ ದೃಢೀಕರಿಸಲಾಗುತ್ತದೆ.
ಮುಂಜಾಗ್ರತಾ ಕ್ರಮ ಏನು?
* ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು
* ಯಾವುದೇ ವಸ್ತುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.
* ಕೆಮ್ಮುವಾಗ ಸೀನುವಾಗ ಬಾಯಿ, ಮೂಗನ್ನು ಕೈನಿಂದ ಮುಚ್ಚಿಕೊಳ್ಳಬೇಕು ಅಥವಾ ಬಟ್ಟೆಯನ್ನು ಅಡ್ಡಲಾಗಿಟ್ಟುಕೊಳ್ಳಬೇಕು.
* ದೇಹದಲ್ಲಿ ಗಾಯಗೊಂಡ ಭಾಗಗಳನ್ನು ಸೂಕ್ಷವಾಗಿ- ನೋಡಿಕೊಳ್ಳಬೇಕು, ಸೆಪ್ಟಿಕ್‌ಗೆ ಅವಕಾಶ ನೀಡಬಾರದು.
* ಸೋಂಕಿನ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದು ತಜ್ಞರ ಸಲಹೆ.