ದಕ್ಷಿಣದ ಖ್ಯಾತ ತಾರೆ, ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ನಿಜವಾಗಲೂ ಅದೃಷ್ಟವಂತೆ. ಸಾಲು ಸಾಲು ಸಿನಿಮಾಗಳನ್ನೂ ಗೆದ್ದಿರುವ ಅವರು, ಇದೀಗ ಟ್ವಿಟರ್ (Twitter) ಸಂಸ್ಥೆಯ ಮಾಲೀಕನ ಮನಸೂ ಗೆದ್ದಿದ್ದಾರೆ. ಈ ಕಾರಣದಿಂದಾಗಿಯೇ ಟ್ವಿಟರ್ ಸಂಸ್ಥೆಯ ಮಾಲೀಕ ಎಲೋನ್ ಮಸ್ಕ್ (Elon Musk) ನಿಂದ ಅನುಷ್ಕಾ ಉಡುಗೊರೆ ಪಡೆದಿದ್ದಾರೆ.
ಎಲೋನ್ ಮಸ್ಕ್ ಗೂ ಅನುಷ್ಕಾಗೆ ಹೇಗೆ ಪರಿಚಯ ಅಂತ ಕೇಳಿದರೆ, ಅದಕ್ಕೆ ಉತ್ತರವಿಲ್ಲ. ಬಹುಶಃ ಅನುಷ್ಕಾ ಯಾರು ಎನ್ನುವುದು ಎಲೋನ್ ಮಸ್ಕ್ ಗೂ ಗೊತ್ತಿರಲಿಕ್ಕಿಲ್ಲ. ಆದರೆ, ಎಲೋನ್ ತಗೆದುಕೊಂಡ ಒಂದು ನಿರ್ಧಾರ ಅನುಷ್ಕಾಗೆ ವರವಾಗಿದೆ. ಹಾಗಾಗಿ ಅದನ್ನು ಗಿಫ್ಟ್ ಎಂದೇ ಅಭಿಮಾನಿಗಳು ಭಾವಿಸಿದ್ದಾರೆ. ಇದನ್ನೂ ಓದಿ:ಪತಿ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಫೋಟೋಶೂಟ್
ಹಣಕೊಟ್ಟು ಚಂದಾದಾರರಾದ ವ್ಯಕ್ತಿಗಳಿಗೆ ಮಾತ್ರ ಟ್ವಿಟರ್ ನಲ್ಲಿ ಬ್ಲೂಟಿಕ್ (BlueTick) ಸಿಗಲಿದೆ ಎಂದು ಮಸ್ಕ್ ಈ ಹಿಂದೆ ಪ್ರಕಟಿಸಿದ್ದರು. ಅದರಂತೆ ಹಣ ಪಾವತಿಸದ ಪ್ರತಿಯೊಬ್ಬರ ಖಾತೆಯಿಂದಲೂ ಬ್ಲೂಟಿಕ್ ಮಾಯವಾಗಿತ್ತು. ಇದನ್ನು ಕೆಲವರು ಸ್ವಾಗತಿಸಿದ್ದರೆ, ಹೆಚ್ಚಿನ ಸಂಖ್ಯೆಯ ಸಿಲೆಬ್ರಿಟಿಗಳು ತಟಸ್ಥರಾಗಿ ಉಳಿದಿದ್ದರು. ಬೆರಳೆಣಿಕೆಯ ಗಣ್ಯರಷ್ಟೇ ಹಣ ಪಾವತಿಸಿದ್ದರಿಂದ, ಟ್ವಿಟರ್ ಗೆ ಬೇರೆ ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ಎಲೋನ್ ಮತ್ತೊಂದು ಪ್ಲ್ಯಾನ್ ಮಾಡಿದ್ದರು. ಅದು ಅನುಷ್ಕಾಗೆ ವರವಾಗಿದೆ.
ನಿನ್ನೆಯಷ್ಟೇ ಅನುಷ್ಕಾ ಶೆಟ್ಟಿಯ ಟ್ವಿಟರ್ ಖಾತೆ ಒಂದು ಮಿಲಿಯನ್ ಹಿಂಬಾಲಕರನ್ನು ಪಡೆದಿದೆ. ಈ ಖುಷಿಯನ್ನು ಅವರು ಹಂಚಿಕೊಂಡಿದ್ದರು. ಇದೇ ಸಮಯದಲ್ಲೇ ಎಲೋನ್ ಮಸ್ಕ್ ಹತ್ತು ಲಕ್ಷ ಹಿಂಬಾಲಕರನ್ನು ಹೊಂದಿದ ಟ್ವಿಟರ್ ಖಾತೆಗೆ ಉಚಿತವಾಗಿ ಬ್ಲೂಟಿಕ್ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಅನುಷ್ಕಾ ಉಚಿತವಾಗಿ ಬ್ಲೂಟಿಕ್ ಪಡೆದಿದ್ದಾರೆ.