ನವದೆಹಲಿ: ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣ ಬಿಜೆಪಿ ಇರಿಸುಮುರಿಸು ತಂದಿಟ್ಟ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ.
ಮೋದಿ ಅವರು ಬೆಳಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ 45 ಸಂಸದರೊಂದಿಗೆ ಸಭೆ ನಡೆಸಿದ್ದು, ವರ್ತನೆ ಹಾಗೂ ಶಿಸ್ತಿನ ಕುರಿತು ಪಾಠ ಮಾಡಿದ್ದಾರೆ.
Advertisement
ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಪುತ್ರ ಹಾಗೂ ಶಾಸಕ ಆಕಾಶ್ ವಿಜಯ್‍ವರ್ಗಿಯಾ ವರ್ತನೆ ಹಾಗೂ ಅಧಿಕಾರಿಗಳ ವಿರುದ್ಧ ಅವರು ನಡೆದುಕೊಂಡ ರೀತಿಯನ್ನು ಪ್ರಸ್ತಾಪಿಸಿ ಮಾತು ಆರಂಭಿಸಿದ್ದಾರೆ. ಈ ವೇಳೆ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕರಾಗಿರುವ ಆಕಾಶ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ, ಯಾವ ನಾಯಕನ ಮಗನಾಗಿದ್ದರೂ ಸರಿ ದುರ್ವರ್ತನೆ ತೋರಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಾವು ಸಂಸದರನ್ನು ಕಳೆದುಕೊಂಡರು ಸರಿ. ಇನ್ನು ಮುಂದೆ ಈ ರೀತಿಯ ದುರ್ವರ್ತನೆ ನಡೆಯುವುದನ್ನು ತಡೆಯಬೇಕಿದೆ ಎಂದು ಎಚ್ಚರಿಸಿದ್ದರು.
Advertisement
ಅದು ಯಾರೇ ಆಗಿರಲಿ, ಯಾರ ಮಗನೇ ಆಗಿರಲಿ ದುರಹಂಕಾರ, ದುರ್ವತೆಯನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದೋರ್‍ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಆಕಾಶ್ ವಿಜಯ್‍ವರ್ಗಿಯಾ ಅವರು ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡುವ ವೇಳೆ ನಿವೇದನ್, ಆವೇದನ್, ದನಾದನ್ ಎಂದು ಹೇಳಿದ್ದು, ಇದು ಯಾವ ರೀತಿಯ ಭಾಷೆ ಎಂದು ಮೋದಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿದ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಂದೋರ್ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಕಾಶ್, ನಮ್ಮದು ಆವೇದನ್, ನಿವೇದನ್ ನಂತರ ದನಾದನ್ ಇದು ನಮ್ಮ ಕಾರ್ಯವೈಖರಿ ಎಂದು ಹೇಳಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಅಂದು ನಡೆದಿದ್ದು ಏನು?
ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದರು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಅಂಗಿ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.