ChikkaballapurKarnatakaLatestLeading NewsMain Post

ಹೆಚ್‌ಡಿಕೆ ರಾಜಕೀಯ ಸ್ಟಂಟ್ ಮಾಡಿದರೆ ಉಪಯೋಗವೇನು – ಸಚಿವ ಸುಧಾಕರ್ ಪ್ರಶ್ನೆ

- ಕಾಂಗ್ರೆಸ್ ದುರವಸ್ಥೆಗೆ ಗುಲಾಂ ನಬಿ ರಾಜೀನಾಮೆ ಸಾಕ್ಷಿ ಎಂದು ಲೇವಡಿ

ಚಿಕ್ಕಬಳ್ಳಾಪುರ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರಿಗೆ ಭೂಸ್ವಾಧೀನ ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲವೇ? ಭೂಸ್ವಾಧೀನ ಮಾಡದೆಯೇ ನೀರಾವರಿ ಯೋಜನೆಗಳು, ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.

ತಾಲೂಕಿನ ಬೀಡಗಾನಹಳ್ಳಿಯಲ್ಲಿ ಸುದ್ದಿಗಾರರು ಕುಮಾರಸ್ವಾಮಿ ಅವರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಸಮೀಪದಲ್ಲಿ ನೀಡುವ ಬಾಲೀಶ ಹೇಳಿಕೆಗಳಿಗೆ ಅರ್ಥವಿಲ್ಲ. ಸಾಕ್ಷಿ ಸಮೇತ ಆರೋಪ ಮಾಡಬೇಕು. ದಾಖಲೆಗಳನ್ನು ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೆ ಅಥವಾ ನ್ಯಾಯಾಲಯಗಳಿಗೆ ನೀಡಬೇಕು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

ಚುನಾವಣೆ ಸಮಯದಲ್ಲಿ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುತ್ತಿವೆ ಎಂಬ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಮಾದ್ಯಮಗಳ ಮುಂದೆ ಮಾತ್ರ ಮಾತನಾಡುತ್ತಿದ್ದು, ಯಾವುದೇ ಆರೋಪದ ಬಗ್ಗೆ ಸಾಕ್ಷ್ಯಗಳಿದ್ದರೆ ನೇರವಾಗಿ ತನಿಖಾ ಸಂಸ್ಥೆಗಳಿಗೆ ನೀಡುವಂತೆ ಸಚಿವರು ಆಗ್ರಹಿಸಿದರು.

ತಮಗೆ ಸಂಬಂಧವಿಲ್ಲ
ಕೈಗಾರಿಕಾ ಭೂಸ್ವಾಧೀನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದೇನೆ. ಆದರೆ ಕಳೆದ ಒಂದು ವರ್ಷದಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆಸುವವರು ಕೈಗಾರಿಕಾ ಇಲಾಖೆಯವರು. ಈ ಸಂಬಂಧ ಕೈಗಾರಿಕಾ ಸಚಿವರ ಜೊತೆಯೂ ಮಾತನಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್

ಎಲ್ಲ ರೀತಿಯಲ್ಲಿ ಸಹಕಾರ ನೀಡುವ ಜೊತೆಗೆ ಅಭ್ಯಂತರವಿಲ್ಲದೆ ಭೂಮಿ ನೀಡುವ ರೈತರ ಭೂಮಿಯನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಷ್ಟು ಸ್ಪಷ್ಟವಾಗಿ ಕೈಗಾರಿಕಾ ಸಚಿವರು ಹೇಳಿದ್ದರೂ ರಾಜಕೀಯ ಮಾಡಿದರೆ ಉಪಯೋಗ ಏನು ಎಂದು ಪ್ರಶ್ನಿಸಿದ ಸಚಿವರು, ಯಾವುದೇ ವಿರೋಧ ವ್ಯಕ್ತಪಡಿಸದ ರೈತರ ಭೂಮಿಯನ್ನು ಮಾತ್ರ ಪಡೆಯಲಾಗುತ್ತಿದೆ. ಹೀಗಿದ್ದರೂ ಇವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಂದೆ ಅವರೂ ಮುಖ್ಯಮಂತ್ರಿ ಆಗಿದ್ದರು. ಅವರೂ ಭೂಸ್ವಾಧೀನ ಮಾಡಿದ್ದಾರೆ. ಅವರ ಅವಧಿಯಲ್ಲಿ ಭೂಸ್ವಾಧೀನ ಮಾಡಿಲ್ಲವೇ? ಭೂಸ್ವಾಧೀನವಾಗದೆ ನೀರಾವರಿ ಯೋಜನೆಗಳು, ಕೈಗಾರಿಕೆಗಳು ಆಗಿದೆಯಾ? ಕೇವಲ ರಾಜಕೀಯ ಸ್ಟಂಟ್‌ ಮಾಡಿದರೆ ಏನು ಪ್ರಯೋಜನ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.

ಗುಲಾಂ ನಬಿ ಅವರ ರಾಜೀನಾಮೆ ಪತ್ರ ಓದಬೇಕು
ಕಳೆದ 50 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ನಂಟು ಹೊಂದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಬರೆದಿರುವ ನಾಲ್ಕು ಪುಟಗಳ ರಾಜೀನಾಮೆ ಪತ್ರ ಓದಿದರೆ ಕಾಂಗ್ರೆಸ್ ಪಕ್ಷದ ಇಂದಿನ ಅವ್ಯವಸ್ಥೆ ಏನು ಎಂಬುದು ಅರಿವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಲೇವಡಿ ಮಾಡಿದರು.

ಅವರ ರಾಜೀನಾಮೆ ಪತ್ರ ನಾನು ಓದಿದ್ದೇನೆ. ಇದರಿಂದ ದೇಶದ ಜನರಿಗೆ ಕಾಂಗ್ರೆಸ್ ಸ್ಥಿತಿ ಮತ್ತು ಅವ್ಯವಸ್ಥೆ ಏನು ಎಂಬುದು ಅರಿವಾಗಲಿದೆ. ಬಹಳ ಹಿಂದೆಯೇ ಕಾಂಗ್ರೆಸ್ ಬಿಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ, ಆದರೆ 50 ವರ್ಷಗಳ ನಂಟಿನ ಕಾರಣ ಇಷ್ಟು ಕಾಲ ತಡೆಹಿಡಿದಿರ‌ಬಹುದು ಎಂದು ಅವರು ಹೇಳಿದರು. ಇದನ್ನೂ ಓದಿ: ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ

ಇನ್ನೂ ಸಹಿಸಲು ಸಾಧ್ಯವಾಗದೆ ಅವರು ಪಕ್ಷ ತೊರೆದಿದ್ದಾರೆ. ಅವರು ಕಾಂಗ್ರೆಸ್ ತೊರೆದಿರುವುದರಲ್ಲಿ ಆಶ್ಚರ್ಯವಿಲ್ಲ. ನಿರೀಕ್ಷಿತ ಮತ್ತು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತಹ ನಾಯಕರು ಮೋದಿ ಅವರ ದೇಶವನ್ನು ಸಮರ್ಥವಾಗಿ ಕಟ್ಟುವ ಪ್ರಯತ್ನಕ್ಕೆ ಕೈ ಜೋಡಿಸುವುದಾದರೆ ಸ್ವಾಗತ ಎಂದರು.

ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಾಬೂ ಜಗಜೀವನ್ ರಾಮ್ ಅವರ ನಂತರ ಏಳು ಬಾರಿ ಸಂಸದರಾಗಿ ಆಯ್ಕೆಯಾದ ನಾಯಕರು ಕೆ.ಹೆಚ್.ಮುನಿಯಪ್ಪ. ಅವರನ್ನು ಅವರ ಪಕ್ಷದಲ್ಲಿ ಯಾವ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂಬುದು ತಿಳಿದ ವಿಚಾರವೇ ಆಗಿದೆ. ಆದರೆ ಅವರ ಮತ್ತು ತಮ್ಮ ಮಧ್ಯೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ಸ್ಫಷ್ಟಪಡಿಸಿದರು.

ಆದಿ ಜಾಂಬವ ಮಠದ ಶ್ರೀಗಳು ಮಠಕ್ಕಾಗಿ ಅಗತ್ಯವಿರುವ ಭೂಮಿಯನ್ನು ನೀಡುವಂತೆ ಮನವಿ ಮಾಡಲು ಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯಲಾಗಿತ್ತು. ಮುಖ್ಯಮಂತ್ರಿಗಳು ಸ್ಥಳದಲ್ಲಿಯೇ ಭೂಮಿ ಮಂಜೂರು ಮಾಡಲು ಆದೇಶ ನೀಡುವ ಜೊತೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲಾ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ ಎಂದರು.

ಹಿಂದುಳಿದವರು, ಪರಿಶಿಷ್ಟರ ಬಗ್ಗೆ ರಾಜ್ಯ ಸರ್ಕಾರಕ್ಕಿರುವ ಕಾಳಜಿ ಇದಾಗಿದ್ದು, ನಮ್ಮ ಪಕ್ಷದ ನೀತಿಯೂ ಸ್ಪಷ್ಟವಾಗಿದೆ. ಅವರನ್ನು ಬಳಸಿಕೊಂಡು ಬಿಸಾಡುವುದಲ್ಲ, ಬಲಹೀನ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕೆ ಇಂದು ಸ್ಥಳದಲ್ಲಿಯೇ ಮುಖ್ಯಮಂತ್ರಿಗಳು ಆದೇಶ ನೀಡಿರುವುದು ಸಾಕ್ಷಿಯಾಗಿದ್ದು, ಕೆ.ಹೆಚ್.ಮುನಿಯಪ್ಪ ಅವರೊಂದಿಗೆ ಯಾವುದೇ ರಾಜಕಾರಣದ ಚರ್ಚೆ ಮಾಡಿಲ್ಲ ಎಂದು ಸಚಿವರು ಪುನರ್ ಸ್ಪಷ್ಟಪಡಿಸಿದರು.

Live Tv

Leave a Reply

Your email address will not be published.

Back to top button