ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನಕ್ಕೆ ಕಾರಣವೇನು?

Public TV
2 Min Read
MANISH SISODIA

ನವದೆಹಲಿ : ಆಮ್ ಆದ್ಮಿ ಪಕ್ಷದ ನಾಯಕ, ಆರೋಗ್ಯ ಸಚಿವ ಸತ್ಯಂದ್ರ ಜೈನ್ ಬಳಿಕ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಬಂಧನವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಹೊಸ ಮದ್ಯನೀತಿಯಲ್ಲಿ (Liquor Policy Probe) ನಡೆದಿದೆ ಎನ್ನಲಾದ ಅಕ್ರಮದ ಆರೋಪದ ಮೇಲೆ ಭಾನುವಾರ ಸಿಬಿಐ (CBI) ಸಿಸೋಡಿಯಾ ಅವರನ್ನು ಬಂಧಿಸಿದೆ.

ಹೊಸ ಮದ್ಯ ನೀತಿಯಡಿ ವ್ಯಾಪಾರಿಗಳಿಗೆ ಪರವಾನಿಗೆ ನೀಡಲು ದೆಹಲಿ ಸರ್ಕಾರ ಲಂಚವನ್ನು ಪಡೆದಿದೆ ಎಂದು ಆರೋಪಿಸಲಾಗಿದ್ದು, ಖಜಾನೆಗೆ ನಷ್ಟ, ರಾಜ್ಯಕ್ಕೆ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

CBI

ಸಿಬಿಐ ಅಧಿಕಾರಿಗಳ ಪ್ರಕಾರ, ಹೊಸ ಅಬಕಾರಿ ನೀತಿಯನ್ನು ಹೇಗೆ ರಚಿಸಲಾಗಿದೆ, ಸಹಿ ಮಾಡಿದವರು ಯಾರು ಮತ್ತು ನಿರ್ಧಾರಕ್ಕೆ ಕಾರಣವಾಗುವ ಚರ್ಚೆಗಳ ವಿವರಗಳನ್ನು ಒಳಗೊಂಡಿರುವ ನಿರ್ಣಾಯಕ ಕಡತಗಳು ಕಾಣೆಯಾಗಿವೆ. ವಿಚಾರಣೆ ವೇಳೆ ಸಿಸೋಡಿಯಾ ಅವರನ್ನು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ ಎನ್ನುವ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಯೊಬ್ಬರು ಸಿಬಿಐಗೆ ನೀಡಿದ ಮಾಹಿತಿ ಪ್ರಕಾರ, ಸಿಸೋಡಿಯಾ ಅವರಿಗೆ ಸೇರಿದ ಮೊಬೈಲ್ ಸಂಖ್ಯೆಗಳಿಂದ ಡ್ರಾಫ್ಟ್‌ನಲ್ಲಿ ಬದಲಾವಣೆಗಳನ್ನು ಮಾಡಲು ವಾಟ್ಸಾಪ್ ಮೂಲಕ ಸೂಚನೆಗಳು ಬಂದಿವೆ. ಆಗಸ್ಟ್ ಮತ್ತು ಸೆಪ್ಟೆಂಬರ್ 2022ರ ನಡುವೆ ಸಿಸೋಡಿಯಾ ಅವರು 18 ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು 4 ಸಿಮ್ ಕಾರ್ಡ್‌ಗಳನ್ನು ಬಳಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗೆಗೂ ಸಿಸೋಡಿಯಾ ‌ಮಾಹಿತಿ ನೀಡಿಲ್ಲ.

Manish Sisodia

ಆ. 19, 2022ರಂದು ಸಿಸೋಡಿಯಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ಅದೇ ದಿನ ಸಿಸೋಡಿಯಾ ಒಂದು ಸಿಮ್ ಕಾರ್ಡ್‌ಗಾಗಿ 3 ಮೊಬೈಲ್ ಫೋನ್‌ಗಳನ್ನು ಬದಲಾಯಿಸಿದ್ದಾರೆ. ಆ. 20ರಂದು 3 ಹ್ಯಾಂಡ್‌ಸೆಟ್‌ಗಳಲ್ಲಿ ಒಂದು ಮೊಬೈಲ್ ಫೋನ್ ಸಂಖ್ಯೆಯನ್ನು ಬಳಸಲಾಗಿದೆ ಎಂದು ಸಿಬಿಐ ಅಧಿಕಾರಿಗಳ ಮೂಲಗಳು ತಿಳಿಸಿವೆ. 2022ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 7 ಹ್ಯಾಂಡ್‌ಸೆಟ್‌ಗಳನ್ನು ಬಳಸಲಾಗಿದೆ. ಅನೇಕ ಸಂದರ್ಭಗಳಲ್ಲಿ, ಒಂದೇ ದಿನದಲ್ಲಿ 2 ಹ್ಯಾಂಡ್‌ಸೆಟ್‌ಗಳಲ್ಲಿ ಒಂದು ಸಿಮ್ ಕಾರ್ಡ್ ಬಳಸಿದೆ. ಸದ್ಯ ಆ ಎಲ್ಲ ಮೂಬೈಲ್‌ಗಳು ನಾಶವಾಗಿದ್ದು, ಈ ಬಗ್ಗೆಯೂ ಸಿಸೋಡಿಯಾ ತೃಪ್ತಿಕರ ಉತ್ತರ ನೀಡಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!

ಆಪ್ತ ಸಹಾಯಕ ಎಂದು ಕರೆಯಲ್ಪಡುವ ದಿನೇಶ್ ಅರೋರಾ ಸಿಬಿಐಗೆ ನೀಡಿರುವ ಮಾಹಿತಿ ಪ್ರಕಾರ, ಅಬಕಾರಿ ನೀತಿಯಲ್ಲಿನ ಬದಲಾವಣೆಗಳ ಕುರಿತು ಸೂಚನೆಗಳು ಸಿಸೋಡಿಯಾ ಅವರಿಂದ ಅನೌಪಚಾರಿಕವಾಗಿ ಬಂದಿವೆ ಎಂದು ಅವರು ದೃಢಪಡಿಸಿದ್ದಾರೆ. ‘ಸೌತ್ ಲಾಬಿ’ಯ ಒತ್ತಾಯದ ಮೇರೆಗೆ ಹೊಸ ಅಬಕಾರಿ ನೀತಿಯಲ್ಲಿ ಮದ್ಯದ ಸಗಟು ವ್ಯಾಪಾರಿಗಳ ಲಾಭಾಂಶವನ್ನು 5% ರಿಂದ 12% ಕ್ಕೆ ಹೆಚ್ಚಿಸಲಾಗಿದೆ ಎಂದು ಸಿಬಿಐ ವರದಿ ಮಾಡಿದೆ. ಇದನ್ನೂ ಓದಿ: ಗೆಲ್ಲುವುದು 123 ಸ್ಥಾನವಲ್ಲ ಜೆಡಿಎಸ್ ತಪ್ಪಾಗಿ ಮುಂದೆ 1 ಸೇರಿಸಿದೆ- ಜಮೀರ್ ಅಹಮ್ಮದ್ ವ್ಯಂಗ್ಯ

Share This Article
Leave a Comment

Leave a Reply

Your email address will not be published. Required fields are marked *