– ಏನಿದು ಹೊಸ ರೋಗ..?, ಲಕ್ಷಣಗಳೇನು..?
ಕೊರೊನಾ ವೈರಸ್.. ಹೆಸರು ಕೇಳಿದರೆನೇ ಭಯ ಶುರುವಾಗುತ್ತೆ. ಯಾಕೆಂದರೆ ಮಹಾಮಾರಿ ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಟ್ಟಾಗ ಸಾಕಷ್ಟು ಕಷ್ಟಗಳನ್ನು ಜನ ಅನುಭವಿಸಿದ್ದಾರೆ. ಎಲ್ಲಾ ಕಡೆಯೂ ಜನ ಕೋವಿಡ್ ನಿಂದ ಸಾವನ್ನಪ್ಪುತ್ತಿದ್ದರು. ಎಲ್ಲಿ ನೋಡಿದರೂ ಕೊರೊನಾ ವೈರಸ್ ಎಂಬ ಮಹಾಮಾರಿ ತಾಂಡವವಾಡುತ್ತಿತ್ತು. ಹೀಗಾಗಿ ಕೊರೊನಾ ವೈರಸ್ ಎಂದರೆ ಈಗಲೂ ಜನ ಬೆಚ್ಚಿ ಬೀಳುತ್ತಾರೆ. ಅಂದು ಕೋವಿಡ್ ನಿಂದ ಅನುಭವಿಸಿದ ನರಕಯಾತನೆ ಈಗಲೂ ಕಣ್ಣ ಮುಂದೆ ಹಾಗೆಯೇ ಇದೆ. ಬಳಿಕ ಕೊರೊನಾ ಲಸಿಕೆ ಬಂತು. ಲಸಿಕೆ ಬಂದ ಬಳಿಕವೂ ಸಾಕಷ್ಟು ಜನ ಯಾತನೆ ಅನುಭವಿಸಿದರು.
ಇದೀಗ ಕೊರೊನಾ ವೈರಸ್ ಎಂಬ ಮಹಾಮಾರಿಯ ಅಧ್ಯಾಯ ಮುಗಿದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಅನ್ನೋವಷ್ಟರಲ್ಲಿ ಮತ್ತೊಂದು ಆತಂಕ ಶುರುವಾಗಿದೆ. ಕೊರೊನಾ ಕಾಲದಲ್ಲಿ ಕಂಡುಬಂದಿದ್ದ ಒಮಿಕ್ರಾನ್ ರೂಪಾಂತರ ಸಾಕಷ್ಟು ಅಪಾಯಕಾರಿಯಾಗಿತ್ತು. ಈ ತಳಿಯಿಂದ ಹತ್ತಾರು ಹೊಸ ತಳಿಗಳು ಹುಟ್ಟಿಕೊಂಡಿದೆ. ಆದರೆ ಈಗ ಇದೇ ತಳಿಯಿಂದ ಮತ್ತೊಂದು ರೂಪಾಂತರ ಹೊರಬಂದಿದೆ.
FLiRT ಎಂದು ಹೆಸರಿಸಲಾಗಿರುವ ಈ ಉಪತಳಿಯು ಅಮೆರಿಕದಲ್ಲಿ ಪತ್ತೆಯಾಗಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈ ವಿಭಿನ್ನ ಗುಂಪನ್ನು ತೀವ್ರ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ 2 (SARS-Cov-2) FLiRT ರೂಪಾಂತರ KP.2 ಎಂದು ಹೆಸರಿಸಲಾಗಿದೆ. ಇದು ಸದ್ಯ ಅಮೆರಿಕದಲ್ಲಿ ವೇಗವಾಗಿ ಹರಡುತ್ತಿದೆ. ಏಪ್ರಿಲ್ 14 ರಿಂದ ಏಪ್ರಿಲ್ 27 ರವರೆಗೆ ಅಮೆರಿಕದಲ್ಲಿ ಸುಮಾರು 25% ನಷ್ಟು COVID-19 ಪ್ರಕರಣಗಳಿಗೆ ಕಾರಣವಾಗಿದೆ.
ಈ ರೂಪಾಂತರದ ತೀವ್ರತೆ ಹೇಗಿದೆ..?: FLiRT ಹೊಸ ರೂಪಾಂತರಗಳೊಂದಿಗೆ ಒಮಿಕ್ರಾನ್ ವಂಶಾವಳಿಯ ಉಪ-ರೂಪವಾಗಿದೆ. ಈ ರೂಪಂತದಲ್ಲಿ ಕಠಿಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸೂಚಿಸುವ ಪ್ರಕಾರ, KP.2 ಇತರ ತಳಿಗಳಿಗಿಂತ ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ ಎಂದು ಸೂಚಿಸುವ ಯಾವುದೇ ಸೂಚಕಗಳು ಪ್ರಸ್ತುತ ಇಲ್ಲ.
FLiRT ನ ಲಕ್ಷಣಗಳು:
* FLiRT ರೂಪಾಂತರದ ರೋಗಲಕ್ಷಣಗಳು JN.1 ರ ಲಕ್ಷಣಗಳನ್ನು ಹೋಲುತ್ತವೆ.
* ಜ್ವರ
* ನಿರಂತರ ಕೆಮ್ಮು
* ಗಂಟಲು ಕೆರೆತ
* ಶೀತ
* ತಲೆನೋವು
* ಸ್ನಾಯು ನೋವುಗಳು
* ಉಸಿರಾಟದ ತೊಂದರೆ
* ಆಯಾಸ
* ರುಚಿ ಇಲ್ಲದಿರುವುದು
* ಜಠರಗರುಳಿನ ಸಮಸ್ಯೆಗಳು (ಉದಾಹರಣೆಗೆ ಹೊಟ್ಟೆ ನೋವು, ಸೌಮ್ಯವಾದ ಅತಿಸಾರ, ವಾಂತಿ)
ರೋಗಲಕ್ಷಣಗಳು ಕೆಲವೊಂದು ವ್ಯಕ್ತಿಗಳಲ್ಲಿ ಬದಲಾಗಬಹುದು ಮತ್ತು ಹೊಸ ರೂಪಾಂತರಗಳೊಂದಿಗೆ ವಿಕಸನಗೊಳ್ಳಬಹುದು ಎಂದು CDC ತಿಳಿಸಿದೆ.
ಇದು ಹೆಚ್ಚು ಸಾಂಕ್ರಾಮಿಕವಾಗಿದೆಯೇ?: ನಿರ್ದಿಷ್ಟವಾಗಿ KP.2 ಅನ್ನು ಹಿಂದಿನ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. FLiRT ರೂಪಾಂತರಗಳು ಉಸಿರಾಟದ ಹನಿಗಳ ಮೂಲಕ ಸುಲಭವಾಗಿ ಹರಡಬಹುದು. ಈ ಮೂಲಕ ಎಲ್ಲರಿಗೂ ಅಪಾಯವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಲಸಿಕೆ ಹಾಕದವರಿಗೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಎಚ್ಚರದಿಂದ ಇರಬೇಕಾಗುತ್ತದೆ.
ತಡೆಗಟ್ಟುವ ವಿಧಾನ: ತೀವ್ರ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು ಬೂಸ್ಟರ್‌ಗಳನ್ನು ಒಳಗೊಂಡಂತೆ ಕೋವಿಡ್-19 ಲಸಿಕೆಗಳನ್ನು ತೆಗೆದುಕೊಂಡರೆ ತಡೆಗಟ್ಟಬಹುದು. ಯಾರಲ್ಲಾದರೂ ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ಅಂತವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಅಲ್ಲದೇ ಮುಂಜಾಗ್ರತಾವಾಗಿ ನೀವು ಒಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ. ಒಂದು ವೇಳೆ ಪಾಸಿಟಿವ್ ಕಾಣಿಸಿಕೊಂಡರೆ ಪ್ರತ್ಯೇಕವಾಗಿರಿ ಹಾಗೂ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ. ಇದರಿಂದ ರೋಗ ಹರಡುವುದನ್ನು ತಪ್ಪಿಸಬಹುದು.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಜೊತೆಗೆ ಆಗಾಗ ನಿಮ್ಮ ಕೈ ಕಾಲುಗಳನ್ನು ಸೋಪಿನಿಂದ ಕ್ಲೀನ್ ಮಾಡಿಕೊಳ್ಳಿ. ಸ್ಥಳೀಯ ಪ್ರಸರಣ ಮಟ್ಟಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಸಾರ್ವಜನಿಕ ಆರೋಗ್ಯ ಮಾರ್ಗದರ್ಶನವನ್ನು ಅನುಸರಿಸುವುದು FLiRT ರೂಪಾಂತರದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ರೂಪಾಂತರಿ ಯಾರಿಗೆ ಹೆಚ್ಚು ಅಪಾಯಕಾರಿ?: ಮಕ್ಕಳು, ಗರ್ಭಿಣಿಯರು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಂತಹ ಕೊಮೊರ್ಬಿಡಿಟಿ ಇರುವವರು ಮತ್ತು ವೃದ್ಧರು ತಮ್ಮ ಯೋಗಕ್ಷೇಮದ ವಿಚಾರದಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು.
ಮಹಾರಾಷ್ಟ್ರದಲ್ಲಿ ಪತ್ತೆ: ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರವಾಗಿರುವ ಒಮಿಕ್ರಾನ್ ಕೊರೊನಾ ವೈರಸ್‌ನ ಹೊಸ ಉಪತಳಿ ಫ್ಲಿರ್ಟ್ ಇದೀಗ ಮಹಾರಾಷ್ಟ್ರದಲ್ಲಿ ಕೂಡ ಪತ್ತೆಯಾಗಿದೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಸುಮಾರು 91 ಪ್ರಕರಣಗಳು ಪತ್ತೆಯಾಗಿದೆ.
ಎಲ್ಲೆಲ್ಲಿ ಎಷ್ಟು ಕೇಸ್ ದಾಖಲು: ಪುಣೆಯಲ್ಲಿ 51, ಥಾಣೆ 20, ಅಮರಾವತಿ, ಔರಂಗಬಾದ್, ಸೊಲ್ಹಾಪುರದಲ್ಲಿ ತಲಾ 2 ಮತ್ತು ಅಹಮ್ಮದ್ ನಗರ, ನಾಸಿಕ್, ಲಾಥೋರ್, ಸಾಂಗ್ಲಿಯಲ್ಲಿ ತಲಾ ಒಬ್ಬರಲ್ಲಿ ಕೋವಿಡ್ ಸೋಂಕಿನ ಉಪತಳಿ ಪತ್ತೆಯಾಗಿದೆ. ಜನವರಿ ತಿಂಗಳಿನಲ್ಲಿ ಅಮೆರಿಕಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಪತ್ತೆಯಾಗಿತ್ತು. ಭಾನುವಾರ ಅಮೆರಿಕದಲ್ಲಿ 1125, ಚಿಲಿಯಲ್ಲಿ 1215, ಹಾಂಕಾಂಗ್‌ನಲ್ಲಿ 696, ಆಸ್ಟ್ರೇಲಿಯಾದಲ್ಲಿ 664 ಪ್ರಕರಣಗಳು ದಾಖಲಾಗಿವೆ.