ಉಡುಪಿ: ಟಿಪ್ಪು ಸುಲ್ತಾನ್ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಮರ ವಿರೋಧಿ ಎಂದು ವ್ಯಾಪಕ ಚರ್ಚೆಗಳಾಗುತ್ತಿವೆ. ಆದರೆ ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಆಧಾರವೇನಿದೆ? ಎಂದು ಇತಿಹಾಸ ತಜ್ಞ ಪ್ರೊ.ಟಿ.ಮುರುಗೇಶಿ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಟಿಪ್ಪು ಹಿಂದೂ ವಿರೋಧಿ ಎಂಬುದಕ್ಕೆ ಯಾವುದೇ ಬಲವಾದ ಆಧಾರಗಳು ಇಲ್ಲ. ಟಿಪ್ಪು ಒಬ್ಬ ರಾಜನಾಗಿ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮದವರನ್ನು ನಡೆಸಿಕೊಂಡಿದ್ದಾನೆ. ಅಧಿಕಾರದಲ್ಲಿದ್ದಾಗ ಬ್ರಿಟಿಷರು ಟಿಪ್ಪುವನ್ನು ಮುಗಿಸಲು ಎಲ್ಲ ಕಾರ್ಯತಂತ್ರಗಳನ್ನು ಮಾಡಿದ್ದರು. ಆಗ ಮಂಗಳೂರು, ಮಲೆನಾಡು ಹಾಗೂ ಕೊಡಗು ಪ್ರದೇಶಗಳಲ್ಲಿನ ಜನರೂ ಬ್ರಿಟೀಷರಿಗೆ ಸಹಾಯ ಮಾಡಿದ್ದರು. ಆದರೂ ಟಿಪ್ಪು ಅದನ್ನು ಹೇಗೆ ನಿಭಾಯಿಸಬೇಕೋ ಹಾಗೆ ನಿಭಾಯಿಸಿದ್ದಾನೆ. ಈ ಸಂದರ್ಭದಲ್ಲಿ ಮಂಗಳೂರು, ಕೊಡಗಿನ ಅನೇಕ ಜನರನ್ನು ಟಿಪ್ಪು ಜೈಲಿಗೆ ಹಾಕಿದ್ದಾನೆ – ಕೊಂದಿದ್ದಾನೆ. ಆದರೆ ಟಿಪ್ಪು ಹಿಂದೂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ಗೆ ಭಾರತರತ್ನ ಕೊಡಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ: ಶೆಟ್ಟರ್
ಮರಾಠರು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದಾಗ ಕರಾವಳಿಯ ಧಾರ್ಮಿಕ ಕೇಂದ್ರಗಳ ಪುನಶ್ಚೇತನಕ್ಕೆ ಟಿಪ್ಪು ಕಾರಣರಾಗಿದ್ದಾನೆ. ಧಾರ್ಮಿಕ ಚಟುವಟಿಕೆಗಳು ಯಥಾಪ್ರಕಾರ ಆರಂಭವಾಗಲು ಸಹಾಯ ಮಾಡಿದ್ದಾನೆ. ಇದೇ ಕಾರಣಕ್ಕಾಗಿ ಇಂದಿಗೂ ಕೊಲ್ಲೂರು ಮತ್ತು ಶೃಂಗೇರಿಯಲ್ಲಿ ಸಲಾಂ ಪೂಜೆಯ ನಡೆದುಕೊಂಡು ಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಟಿಪ್ಪು ಸುಲ್ತಾನ್‍ರಿಂದ ಮೈಸೂರಿನ ಮಹಾರಾಜರಿಗೆ ಭಾರೀ ಕೆಡುಕಾಗಿದೆ: ಮೈಸೂರು ರಾಜಮಾತೆ
ಕರ್ನಾಟಕದ ಮೇಲೆ ಚೋಳರು ದಾಳಿ ಮಾಡಿ ಹಳ್ಳಿ – ಹಳ್ಳಿಗೆ ಬೆಂಕಿಯಿಟ್ಟರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು. ಆದರೆ, ಟಿಪ್ಪು ಬ್ರಿಟಿಷರಿಗೆ ಸಹಾಯ ಮಾಡಿದವರನ್ನು ಮಾತ್ರ ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಂದಿಗೂ ಟಿಪ್ಪು ಸುಲ್ತಾನ್‌ನನ್ನು ವಿರೋಧಿಸುವುದು ರಾಜಕೀಯ ಕಾರಣಕ್ಕಾಗಿಯೇ ಹೊರತು ಧಾರ್ಮಿಕ ಕಾರಣಕ್ಕಲ್ಲ. ಅವನನ್ನು ಹಿಂದೂ ವಿರೋಧಿಯೆಂದು ಚಾರಿತ್ರಿಕವಾಗಿ ನಿರ್ಧಾರ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಸುಲ್ತಾನ್ ಶೃಂಗೇರಿ, ಕೊಲ್ಲೂರಿಗೆ ಭೇಟಿ ಕೊಟ್ಟ ಬಗ್ಗೆ ದಾಖಲೆಯಿಲ್ಲ. ಆದರೆ ಶೃಂಗೇರಿಗೆ ಮಾಡಿದಂತಹ ದಾನ ಧರ್ಮ ಮತ್ತು ಸಹಾಯಕ್ಕೆ ಅಲ್ಲಿನ ಮಠದಲ್ಲಿ ದಾಖಲೆಗಳಿವೆ. ಶಂಕರನಾರಾಯಣದ ದೇವಸ್ಥಾನಕ್ಕೆ ಗಂಟೆ ಕೊಟ್ಟಿದ್ದು ಈಗಲೂ ನೆನಪಿದೆ. ಸುಖಾ ಸುಮ್ಮನೆ ಯಾವುದೇ ಪರಂಪರೆ ಸೃಷ್ಟಿಯಾಗುವುದಿಲ್ಲ. ಕರಾವಳಿಯ ಧಾರ್ಮಿಕ ಕೇಂದ್ರಗಳಿಗೆ ನೀಡಿದ ಸಹಾಯದಿಂದ ಇಂದಿಗೂ ಸಲಾಂ ಆರತಿ ಪರಂಪರೆಯಾಗಿ ಉಳಿದುಕೊಂಡಿದೆ ಎಂದು ಅವರು ವಿವರಿಸಿದ್ದಾರೆ.