ಅಂತೂ ಇಂತೂ ಗಣೇಶ ಹಬ್ಬವೂ ಬಂತು. ಮಕ್ಕಳಿಗೆ, ಪುರುಷರಿಗೆ ವಿಘ್ನ ವಿನಾಯಕನಿಗೆ ಬಪ್ಪ ಮೋರೆಯಾ ಎಂದು ಜಯಘೋಷ ಕೂಗುತ್ತಾ ಆತನನ್ನು ಮೂರ್ತಿಯನ್ನು ಮನೆಗೆ ತರೋದು ಒಂದು ಖುಷಿಯಾದರೆ, ಹೆಣ್ಮಕ್ಕಳಿಗೆ ಗಣೇಶ ಹಬ್ಬದ ಮುಂದಿನ ಆಚರಿಸುವ ಗೌರಿ ಹಬ್ಬ ತುಂಬಾ ವಿಶೇಷವಾಗಿರುತ್ತದೆ.
ಹೌದು, ಆ.27 ಗಣೇಶ ಹಬ್ಬ ಆದ್ರೆ, ಅದರ ಮುಂದಿನ ದಿನ ಅಂದ್ರೆ ಆ.26 ಮಂಗಳವಾರ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ದಾಂಪತ್ಯ ಜೀವನವು ಸದಾ ಸಂತೋಷದಿಂದ, ಸುಖ ನೆಮ್ಮದಿಯಿಂದ ಕೂಡಿರಲ್ಲಿ ಎಂದು ಮಹಿಳೆಯರು ಗೌರಿಯನ್ನು ಪೂಜಿಸುತ್ತಾರೆ.
ಗೌರಿ ಹಬ್ಬದ ಇತಿಹಾಸವೇನು?
ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸು ಮಾಡುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ.
ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆ. ಅಂತೆಯೇ ಪಾರ್ವತಿ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವಿಕೆಯನ್ನು ಆಚರಿಸಲಾಗುತ್ತದೆ. ಮರುದಿನ ಪಾರ್ವತಿ ಸುತ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾಗಿ, ಪಾರ್ವತಿ ದೇವಿಯ ತವರು ಮನೆಗೆ ಆಗಮಿಸುವುದನ್ನು ಗೌರಿ ಹಬ್ಬವಾಗಿ ಆಚರಿಸಲಾಗುತ್ತದೆ.
ಏಕೆ ಆಚರಿಸುತ್ತಾರೆ?
ಗೌರಿ ಹಬ್ಬದ ಆಚರಣೆಯ ಹಿಂದೆಯೂ ಪುರಾಣ ಕಥೆಯಿದೆ. ಹಿಂದೆ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡುವ ಮೂಲಕ ಮಹಾಶಿವನನ್ನು ಒಲಿಸಿಕೊಂಡಳು. ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಗೌರಿಯನ್ನು ಪ್ರಾರ್ಥಿಸುತ್ತಾರೆ. ಇನ್ನು ಅವಿವಾಹಿತರು ಒಳ್ಳೆಯ ಬಾಳ ಸಂಗಾತಿ ಸಿಗಲೆಂದು ಪ್ರಾರ್ಥಿಸುತ್ತಾರೆ.
ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಗಳನ್ನು ಮಾಡುವುದರಿಂದ ತಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಮನೆಮಾಡುತ್ತದೆ ಎಂಬುದು ನಂಬಿಕೆ. ಮುಖ್ಯವಾಗಿ ದಾಂಪತ್ಯ ಜೀವನವು ಚೆನ್ನಾಗಿರಲು ಗೌರಿ ಹಬ್ಬವನ್ನು ಮಹಿಳೆಯರು ಆಚರಿಸುತ್ತಾರೆ.
ಗೌರಿ ಪೂಜೆ ಮಾಡುವ ವಿಧಾನ
ಮೊದಲಿಗೆ ಹೆಣ್ಣುಮಕ್ಕಳು ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ, ಹೂವುಗಳು, ರಂಗೋಲಿ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ, ಕುಂಕುಮ, ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಪೂಜೆಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಗೌರಿ ಹಬ್ಬದ ದಿನದಂದು ಗೌರಿ ದೇವಿಯ ವಿಗ್ರಹ ಹೂವಿನಿಂದ ಅಲಂಕರಿಸಲಾಗುತ್ತದೆ. ತಾಯಿ ಗೌರಿಗೆ ಹೊಸ ಸೀರೆ, ಆಭರಣ ಹಾಕಿ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ಕಲಶವನ್ನ ಸಿದ್ಧ ಮಾಡಬೇಕು. ಬಳಿಕ ತಾಯಿ ಗೌರಿಗೆ ಭಕ್ತಿಯಿಂದ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ಸುಮಂಗಲಿಯರಿಗೆ ಬಾಗಿನ ನೀಡುವುದು ಕೂಡ ಗೌರಿ ಹಬ್ಬದ ವಿಶೇಷವಾಗಿದೆ.