ಬೆಂಗಳೂರು: ಇಂದಿನ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ, ಟೆಲಿಕಾಮ್, ಇ- ಕಾಮಸ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಭಾರತದ ಐದನೆಯ ಅತಿ ದೊಡ್ಡ ನಗರ ಕೂಡ ಆಗಿದೆ. ಇಷ್ಟೆಲ್ಲಾ ಸಾಧನೆ ಇದ್ದರೂ ಸಹ ಬೆಂಗಳೂರಿನ ಸಂಚಾರಿ ವ್ಯವಸ್ಥೆ ನಗರದ ಬೆಳವಣಿಗೆಗೆ ಸಮನಾಗಿ ಬೆಳದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಉತ್ತಮ ಸಾರಿಗೆ ಸಂಪರ್ಕವನ್ನು ಏರ್ಪಡಿಸಲು ಒಂದಕ್ಕೊಂದು ಸಂಪರ್ಕ ಹೊಂದಿರುವ ಆರು ಎಲಿವೇಟೆಡ್ ಕಾರಿಡಾರ್‍ಗಳನ್ನು ಮುಂದಿನ ನಾಲ್ಕು ವರ್ಷದಲ್ಲಿ ಹೈಬ್ರೀಡ್ ಅನ್ಯೂಟಿ ಪ್ರಕಾರದಲ್ಲಿ 15,825 ಕೋಟಿ ರೂ.ಗಳಲ್ಲಿ ನಿರ್ಮಿಸಲು ಯೋಜಿಸಿದೆ.
ಈ ಯೋಜನೆ ಸಂಪೂರ್ಣವಾಗಿ ಎಲಿವೇಟಿಡ್ ಕಾರಿಡಾರ್ ಆಗಿರುವುದರಿಂದ ಹಾಗೂ ಬೆಂಗಳೂರು ಮೆಟ್ರೋ ಯೋಜನೆಯನ್ನು ಗಮನದಲ್ಲಿರಿಸಿಕೊಂಡು ನಿರ್ಮಿಸಲಾಗುವುದರಿಂದ ಬೆಂಗಳೂರು ಸಂಪರ್ಕ ವ್ಯವಸ್ಥೆಗೆ ಇದು ಅತ್ಯುತ್ತಮ ಕೊಡುಗೆಯಾಗಿರುತ್ತದೆ. ಈ ಯೋಜನೆಯನ್ನು ಕೆಆರ್‍ಡಿಸಿಎಲ್ ಮುಖಾಂತರ ಹೈಬ್ರಿಡ್ ಅನ್ಯೂಟಿ ಮುಖಾಂತರ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 1000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಮೆಟ್ರೋ ರೈಲು
ಬೆಂಗಳೂರು `ನಮ್ಮ ಮೆಟ್ರೋ’ ರೈಲು ಯೋಜನೆ ಹಂತ-03 ರ ವ್ಯಾಪ್ತಿಯಲ್ಲಿ 2018-19 ರ ಆಯವ್ಯಯದಲ್ಲಿನ ಹೊಸ ಯೋಜನೆಗಳಾದ ಜೆ.ಪಿ.ನಗರದಿಂದ ಕೆ.ಆರ್.ಪುರಂ ವರೆಗೆ 42.75 ಕಿ.ಮೀ.ಗಳು, ಟೋಲ್‍ಗೇಟ್‍ನಿಂದ ಕಡಬಗೆರೆ ವರೆಗೆ 12.5 ಕಿ.ಮೀ.ಗಳು, ಗೊಟ್ಟಿಗೆರೆಯಿಂದ ಬಸವಪುರದ ವರೆಗೆ 3.07 ಕಿ.ಮೀ.ಗಳು, ಆರ್.ಕೆ ಹೆಗ್ಡೆ ನಗರದಿಂದ ಏರೋಸ್ಪೇಸ್ ಪಾರ್ಕ್‍ವರೆಗೆ 18.95 ಕಿ.ಮೀ.ಗಳು, ಕೋಗಿಲು ಕ್ರಾಸ್‍ನಿಂದ ರಾಜಾನುಕುಂಟೆವರೆಗೆ 10.6 ಕಿ.ಮೀ.ಗಳು ಮತ್ತು ಇಬ್ಬಲೂರುನಿಂದ ಕರ್ಮಲ್‍ರಾಮ್ ವರೆಗೆ 6.67 ಕಿ.ಮೀ.ಗಳು, ಒಟ್ಟು 95 ಕಿ.ಮೀ.ಗಳ ಉದ್ದದ ಮಾರ್ಗಗಳ ಅಧ್ಯಯನ ನಡೆಸಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಳ್ಳಂದೂರು ಕೆರೆಯ ಸರ್ವಾಂಗೀಣ ಪುನಶ್ಚೇತನಕ್ಕಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಹಭಾಗಿತ್ವದೊಂದಿಗೆ ಬೆಳ್ಳಂದೂರು ಕೆರೆಯ ನೀರನ್ನು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಕೃಷಿ ಚಟುವಟಿಕೆಗಳ ಹನಿ ನೀರಾವರಿಗೆ ಒದಗಿಸಲು ಕ್ರಮಕೈಗೊಳ್ಳಲಾಗುವುದು.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 5,000 ನಿವೇಶನ ಹಂಚಲಾಗಿದ್ದು, ಇನ್ನೂ 5,000 ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. ಭೂಮಾಲೀಕರಿಗೆ ಮೊದಲನೇ ಹಂತದಲ್ಲಿ 2,157 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 3,000 ನಿವೇಶನವನ್ನು ಹಂಚಿಕೆ ಮಾಡಲಾಗುವುದು.
ಸರ್ಕಾರವು ಬೆಂಗಳೂರು ನಗರದ ಹೊರವಲಯದಲ್ಲಿ ಫೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಿರುತ್ತದೆ. 65 ಕಿ.ಮೀ ಉದ್ದದ ರಸ್ತೆಯನ್ನು ಪಿಆರ್‍ಆರ್ ನಿರ್ಮಿಸಲು ಭೂಸ್ವಾಧೀನ ವೆಚ್ಚ ಸೇರಿದಂತೆ ಅಂದಾಜು ಮೊತ್ತ 11,950 ಕೋಟಿ ರೂ.ಗಳಾಗುತ್ತದೆ. ಸದರಿ ಕಾಮಗಾರಿಯನ್ನು ಸ್ಪೇಷಲ್ ಪರ್ಪೋಸ್ ವೆಹಿಕಲ್ (ಎಸ್‍ಪಿವಿ) ಮುಖಾಂತರ ಅನುಷ್ಠಾನಗೊಳಿಸಲು ಸರ್ಕಾರದ ಅನುವೋದನೆಯಾಗಿದ್ದು, ಪ್ರಸ್ತುತ ಸ್ಪೇಷಲ್ ಪರ್ಪೋಸ್ ವೆಹಿಕಲ್ (ಎಸ್‍ಪಿವಿ) ಕಾರ್ಯೋನ್ಮುಖವಾಗಿರುತ್ತದೆ. ಪಿಆರ್‍ಆರ್ ಗೆ ಬೇಕಾಗಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕಾಮಗಾರಿಯನ್ನು ಕೈಗೊಳ್ಳಲಾಗುವುದು.
ಪೌರಾಡಳಿತ
ನಗರ ಪ್ರದೇಶದಲ್ಲಿ ವಾಹನ ಸಂಚಾರದ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಆಗುವ ತೊಂದರೆ ಹಾಗೂ ವಾಹನ ದಟ್ಟಣೆಯನ್ನು ತಪ್ಪಿಸಲು ಮೊದಲ ಹಂತದಲ್ಲಿ 5 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ನಾಗರಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಟಲೈಟ್ ಇಮೇಜ್ ಬಳಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಜಿಐಎಸ್ ಆಧಾರಿತ ಮ್ಯಾಪಿಂಗ್ ಮಾಡಲು ಉದ್ದೇಶಿಸಿದೆ. ರಾಜ್ಯದ 10 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಜಾಲದ ಮ್ಯಾಪಿಂಗ್ ಮಾಡಲು ಉದ್ದೇಶಿಸಿದೆ.