ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ. ಹೊಸ ಹೊಸ ಸಂಗತಿಗಳ ಮೂಲಕ ಭಟ್ಟರು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಚಿತ್ರವನ್ನು ಚಾಲ್ತಿಯಲ್ಲಿರುವಂತೆ ಮಾಡಿದ್ದಾರೆ. ಈ ಚಿತ್ರದಲ್ಲಿ ಚೆಂದದ್ದೊಂದು ಪಾತ್ರದಲ್ಲಿ ನಟಿಸಿರೋ ತಮಿಳು ನಟಿ ಅಕ್ಷರಾ ಗೌಡ ಇದೀಗ ಯೋಗರಾಜಭಟ್ಟರ ಬಗ್ಗೆ ಮಾತಾಡಿದ್ದಾರೆ.
ಮೂಲತಃ ಕನ್ನಡದ ಹುಡುಗಿಯಾಗಿದ್ದರೂ ತಮಿಳು ಚಿತ್ರರಂಗದಲ್ಲಿ ನೆಲೆ ನಿಂತಿರೋ ಅಕ್ಷರಾ ಗೌಡಾಗೆ ಕನ್ನಡ ಚಿತ್ರದಲ್ಲಿ ನಟಿಸೋ ಆಸೆ ಬಹು ಹಿಂದಿನದ್ದು. ತನ್ನ ನೆಲದಲ್ಲಿಯೇ ಮಿಂಚಬೇಕೆಂಬ ಬಯಕೆಯಿಂದ ಪ್ರಯತ್ನ ಜಾರಿಯಲ್ಲಿಟ್ಟಿದ್ದ ಈಕೆಯ ಕನಸನ್ನು ನನಸಾಗಿಸಿದವರು ಯೋಗರಾಜ ಭಟ್.
ಪಂಚತಂತ್ರ ಚಿತ್ರದಲ್ಲಿ ಅಕ್ಷರಾ ಗೌಡ ಮುಖ್ಯವಾದ, ಪ್ರಾಮುಖ್ಯತೆ ಇರುವ ಪಾತ್ರವೊಂದರಲ್ಲಿ ನಟಿಸಿದ್ದಾರಂತೆ. ಈ ಸಂಬಂಧವಾಗಿ ಒಂದಷ್ಟು ದಿನಗಳ ಕಾಲ ಚಿತ್ರ ತಂಡದ ಭಾಗವಾಗಿದ್ದ ಅಕ್ಷರಾ ಯೋಗರಾಜ ಭಟ್ಟರು ಚೇತೋಹಾರಿಯಾಗಿ ನಗಿಸುತ್ತಾ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಕೆಲಸ ಮಾಡುವ ಶೈಲಿಯನ್ನು ಮೆಚ್ಚಿಕೊಂಡಿದ್ದಾಳೆ. ಯೋಗರಾಜ ಭಟ್ ತಮ್ಮನ್ನು ಪ್ರೀತಿಯಿಂದ ಗೌಡ್ರೇ ಎಂದು ಕರೆಯುತ್ತಿದ್ದುದರ ಬಗೆಗೂ ಖುಷಿಯಾಗಿದ್ದಾರೆ.
ಈ ಚಿತ್ರದ ಮೂಲಕವೇ ತನಗೆ ಕನ್ನಡದಲ್ಲಿ ಬ್ರೇಕ್ ಸಿಗುತ್ತದೆ ಅಂದುಕೊಂಡಿರೋ ಅಕ್ಷರಾ, ಅದು ನಿಜವಾದರೆ ಇಲ್ಲಿಯೇ ನೆಲೆ ನಿಲ್ಲುವ ಆಸೆ ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv