ಬೆಂಗಳೂರು: 72 ಸ್ವಾತಂತ್ರ್ಯ ದಿನಾಚರಣೆಗೆ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ.
ಪೊಲೀಸ್ ಪಡೆ, ಹೊಂಗಾಡ್ರ್ಸ್, ಎನ್‍ಸಿಸಿ, ಶಾಲಾ ಮಕ್ಕಳು, ವಾದ್ಯಗೋಷ್ಠಿ ತಂಡ ಸೇರಿದಂತೆ ವಿವಿಧ ತಂಡಗಳು ಇಂದು ತಾಲೀಮು ನಡೆಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬೆಂಗಳೂರು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಜಂಟಿಯಾಗಿ ತಾಲೀಮು ಪರಿಶೀಲನೆ ನಡೆಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಮೈದಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಭದ್ರತೆಗಾಗಿ ಮೈದಾನದ ಸುತ್ತ 1,500 ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 9 ಡಿಸಿಪಿ, 16 ಎಸಿಪಿ, 47 ಪಿಐ, 102 ಪಿಎಸ್‍ಐ, 77 ಎಎಸ್‍ಐ, 540 ಪಿಸಿ, 75 ಮಹಿಳಾ ಸಿಬ್ಬಂದಿ, 114 ಮಪ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೈದಾನದ ಸುತ್ತ ಮುತ್ತ 56 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದರು.
ಇಷ್ಟೇ ಅಲ್ಲದೇ 9 ಕೆಎಎಸ್‍ಆರ್‍ಪಿ ತುಕಡಿ, 5 ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ವಾಟ್, 1 ಆರ್ ಯಯವಿ ನಿಯೋಜನೆ, 4 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ. ಮೈದಾನಕ್ಕೆ ಬರುವ ಸಾರ್ವಜನಿಕರು ಮೊಬೈಲ್, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್, ಶಸ್ತ್ರಾಸ್ತ್ರ, ಚಾಕು, ಚೂರಿ, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲಿ, ಬಾವುಟ, ಪಟಾಕಿ, ಸ್ಫೋಟಕ ವಸ್ತು ತರುವಂತಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
ಆಗಸ್ಟ್ 15 ರಂದು ಹಸಿರು ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸಾಂಕೇತಿಕವಾಗಿ ಗಿಡ ನೆಟ್ಟು ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews