ಬೆಂಗಳೂರು: ಕೊನೆಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲು ಸಾಲು ಅಡೆತಡೆಗಳ ನಡುವೆಯೂ ಡಿ.ಕೆ.ಶಿವಕುಮಾರ್ ಕೆಪಿಸಿಸಿಯ ಚುಕ್ಕಾಣಿ ಹಿಡಿದಿದ್ದಾರೆ. ಸಾಕಷ್ಟು ಅಡೆತಡೆಗಳಿದ್ದರೂ ಡಿ.ಕೆ.ಶಿವಕುಮಾರ್ ಕೆಲವು ಪ್ರಮುಖ ಅಂಶಗಳಿಂದಲೇ ಅಧ್ಯಕ್ಷ ಸ್ಥಾನಕ್ಕೇರಿರುವುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಆರಂಭಗೊಂಡಿವೆ.
ನೇಮಕಕ್ಕೆ ಕಾರಣವಾದ ಅಂಶಗಳು: ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಟ್ರಬಲ್ ಶೂಟರ್ ಇಮೇಜ್ ಹೊಂದಿದ್ದಾರೆ. ಪಕ್ಷವನ್ನು ಸೋಲಿನ ಕಷ್ಟಗಳಿಂದ ಪಾರು ಮಾಡುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಲ್ಲಿದೆ ಎಂಬುವುದು ಹೈಕಮಾಂಡ್ ನಂಬಿಕೆ.
ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಿಯಾ ಆಪ್ತ ಅಹಮದ್ ಪಟೇಲ್ ಅವರನ್ನು ಜಯಗಳಿಸಲು ಶಾಸಕರನ್ನು ರೆಸಾರ್ಟಿನಲ್ಲಿ ಇಟ್ಟ ಜವಾಬ್ದಾರಿಯಿಂದಲೇ ಡಿ.ಕೆ.ಶಿವಕುಮಾರ್ ಐಟಿ, ಇಡಿಯ ಸಂಕಷ್ಟಕ್ಕೆ ಒಳಗಾಗಬೇಕಾಯ್ತು. ಹಾಗಾಗಿ ಋಣ ಸಂದಾಯಕ್ಕಾಗಿ ಡಿ.ಕೆ. ಶಿವಕುಮಾರ್ ನೇಮಕವಾಗಿರುವ ಸಾಧ್ಯತೆಗಳಿವೆ.
ಈ ಹಿಂದೆ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಪಕ್ಷದ ನೆರವಿಗೆ ಡಿಕೆ ಶಿವಕುಮಾರ್ ನಿಂತಿದ್ದು ಸಹ ಹೈ ಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿತ್ತು. ಕರ್ನಾಟಕ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದಾಗಲೂ ಡಿಕೆಶೀ ಹೋಟೆಲ್ ಮುಂದೆ ಪ್ರತಿಭಟಿಸಿದ್ದು ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿತ್ತು.
ನಾಯಕತ್ವದ ಕೊರತೆ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ನಲ್ಲಿ ಸದ್ಯಕ್ಕೆ ಡಿಕೆ ಶಿವಕುಮಾರ್ ಅನಿವಾರ್ಯ ಅನ್ನೋ ಕಾರ್ಯಕರ್ತರ ಹಾಗೂ ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಎಲ್ಲ ಅಂಶಗಳಿಂದಲೇ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟ ದೊರಕಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಮುಂದಿವೆ ಸವಾಲುಗಳು: ಕೆಪಿಸಿಸಿ ಸ್ಥಾನಗಳಿಗಾಗಿ ರಾಜ್ಯ ಕಾಂಗ್ರೆಸ್‍ನಲ್ಲಿ ಮೂಲ ಮತ್ತು ವಲಸಿಗ ಎಂಬ ಎರಡು ಬಣಗಳು ಕಾಣಿಸಿಕೊಂಡಿದ್ದವು. ಈಗ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕಿದೆ. ಇದರ ಜೊತೆಗೆ ತಮ್ಮ ವಿರುದ್ಧ ಇರುವ ಕಾನೂನು ತೊಡುಕಗಳನ್ನು ನಿವಾರಿಸಿಕೊಳ್ಳಬೇಕಿದೆ. ಈಗಿನಿಂದಲೇ ಪಕ್ಷವನ್ನು ಭದ್ರವಾಗಿ ಸಂಘಟಿಸಿ ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಬೇಕು.
ಪಕ್ಷದಲ್ಲಿಯ ರಾಜಕಾರಣವನ್ನು ಬದಿಗಿಟ್ಟು, ಬಿಜೆಪಿ ವಿರುದ್ಧ ಹೋರಾಟ ಮಾಡಬೇಕಾದದ್ದು ಕಾಂಗ್ರೆಸ್‍ಗೆ ಅನಿವಾರ್ಯವಾಗಿದೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಜಾತಿ, ಪ್ರಾಂತ್ಯ, ಹಿರಿತನದ ಆಧಾರದ ಮೇಲೆ ಪದಾಧಿಕಾರಿಗಳ ಹಂಚಿಕೆ ಮಾಡಬೇಕು. ಜೊತೆಗೆ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಬಣದ ಬೆಂಬಲಿಗರಿಗೆ ಸ್ಥಾನಮಾನ ನೀಡಿ ವಿಶ್ವಾಸಕ್ಕೆ ತಗೆದುಕೊಳ್ಳಬೇಕು.
ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು. ಕಳೆದ ಎರಡು ವರ್ಷಗಳಲ್ಲಿದ್ದ ಜೆಡಿಎಸ್ ಜೊತೆಗಿನ ಸಾಫ್ಟ್ ಕಾರ್ನರ್ ನ್ನು ಡಿ.ಕೆ.ಶಿವಕುಮಾರ್ ಎದುರಿಸಬೇಕು. ಸಮುದಾಯದ ಮತ ಗಳಿಕೆ ಆಗಬೇಕಾದ್ರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಎದುರು ಹಾಕಿಕೊಳ್ಳಲೇಬೇಕು.
ಕೆಪಿಸಿಸಿ ಹೊಸ ಸಾರಥಿಯಾಗಿರುವ ಡಿ.ಕೆ.ಶಿವಕುಮಾರ್ ಮುಂದಿನ ಹಾದಿ ಸುಲಭದಾಗಿಲ್ಲ. ಡಿಕೆಶಿ ಜೊತೆಯಲ್ಲಿಯೇ ಮೂವರ ಕಾರ್ಯಾಧ್ಯಕ್ಷರ ನೇಮಕವಾಗಿದೆ. ಈ ಮೂವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದಲ್ಲಿ ಡಿ.ಕೆ.ಶಿವಕುಮಾರ್ ದಾರಿ ಕಷ್ಟವಾಗಲಿದೆ. ಜೊತೆಗೆ ವಿಪಕ್ಷ ನಾಯಕ, ಸಿಎಲ್ ಪಿ ನಾಯಕ ಸಿದ್ದರಾಮಯ್ಯನವರ ಬೆಂಬಲವೂ ಡಿ.ಕೆ.ಶಿವಕುಮಾರ್ ಅವರಿಗೆ ಅನಿವಾರ್ಯತೆ ಇದೆ.