ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ..! ಈ ಡೈಲಾಗ್ ʻಕಾಂತಾರʼ ಸಿನಿಮಾದಲ್ಲಿ ಕೇಳಿರುತ್ತೀರಿ. ಅದೇ ರೀತಿ ಮಲೆನಾಡಲ್ಲಿಒಂದು ರೀತಿ ಸೊಪ್ಪು ಇರುತ್ತೆ.. ಅದನ್ನ ಮುಟ್ಟಿದ್ರೆ ಮೈ ಕೈಯೆಲ್ಲ ತುರಿಕೆ, ಅಲರ್ಜಿ ಆಗುತ್ತೆ. ಈಗ ಸ್ಪೇನ್‌ನ (Spain) ಕಡಲ ತೀರಕ್ಕೆ ಅಂತಹದ್ದೇ ಒಂದು ಸಮಸ್ಯೆ ಎದುರಾಗಿದೆ. ಇಲ್ಲಿನ ಕಡಲ ತೀರಕ್ಕೆ (Beach) ಪುಟ್ಟ ಡ್ರ್ಯಾಗನ್‌ಗಳು (Blue Dragons) ದಾಳಿ ಮಾಡಿ, ಬೀಚ್‌ಗಳನ್ನು ಮುಚ್ಚುವಂತೆ ಮಾಡಿವೆ. ಈ ಪುಟ್ಟ ನೀಲಿ ಡ್ರ್ಯಾಗನ್‌ಗಳು ನೋಡಲು ಸುಂದರವಾಗಿವೆ. ಹಾಗಂತ ಮುಟ್ಟಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಈ ಪುಟ್ಟ ದಾಳಿಕೋರರು ಯಾರು? ಇವುಗಳ ವಿಶೇಷ ಏನು? ಎಂಬುದನ್ನ ಇಲ್ಲಿ ವಿವರಿಸಲಾಗಿದೆ.
ಏನಿದು ನೀಲಿ ಡ್ರ್ಯಾಗನ್?
ಕಡಲ ಸೌಂದರ್ಯ ಹೆಚ್ಚಿಸುವ ನೀಲಿ ಅಪ್ಸರೆಯರು ಮೆಡಿಟರೇನಿಯನ್ ಸಮುದ್ರದಲ್ಲಿ ಕಾಣಸಿಗುತ್ತವೆ. ಮೇಲಿನಿಂದ ನೋಡಿದಾಗ ಈ ತೇಲುವ ಮೃದಂಗ್ವಿಗಳ (ಗ್ಲಾಕಸ್ ಅಟ್ಲಾಂಟಿಕಸ್) ಬಿಳಿ-ಬೂದು ಬಣ್ಣದ ಹೊಟ್ಟೆ ಕಾಣುವುದಿಲ್ಲ. ಕೆಳಗಿನಿಂದ, ಅವು ಪ್ರಕಾಶಮಾನವಾದ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತವೆ. ನೀರಿನಲ್ಲಿ ಸಮುದ್ರದ ಬಣ್ಣದ್ಲಲ್ಲೇ ಇರುವುದರಿಂದ ಇವು ಪರಭಕ್ಷಕಗಳಿಂದ ಪಾರಾಗುತ್ತವೆ. ದೂರದಿಂದ ನೋಡಿದರೆ ಸುಂದರವಾಗಿ ಆಕರ್ಷಿಸುವ ಈ ಪುಟ್ಟ (1.2 ಇಂಚು) ಹುಳಗಳು ಮುಟ್ಟಲು ಯೋಗ್ಯವಲ್ಲ! ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು
ನೀಲಿ ಡ್ರ್ಯಾಗನ್ ಮುಟ್ಟಿದ್ರೆ ಗತಿ ಏನು?
ಇವುಗಳನ್ನು ಅಕಸ್ಮಾತ್ ಮುಟ್ಟಿದ್ರೆ ಭಾರೀ ಸಂಕಷ್ಟವನ್ನೇ ಅನುಭವಿಸಬೇಕಾಗುತ್ತದೆ. ಅಂದರೆ ಉರಿಯೂತ, ವಾಕರಿಕೆ, ನೋವು, ವಾಂತಿ ಅಥವಾ ತೀವ್ರವಾದ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೇ ಅವು ಚರ್ಮದ ಮೇಲೆ ಗಾಯಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ನೀಲಿ ಡ್ರ್ಯಾಗನ್‌ಗಳು ಪೋರ್ಚುಗೀಸ್ ಮ್ಯಾನ್-ಓ’-ವಾರ್‌ನಂತಹ (ಇದೊಂದು ಬಗೆಯ ಜೆಲ್ಲಿ ಫಿಶ್) ವಿಷಕಾರಿ ಜೀವಿಗಳನ್ನು ತಿನ್ನುತ್ತದೆ. ಈ ಮೂಲಕ ಮ್ಯಾನ್-ಓ’-ವಾರ್‌ನ ವಿಷಕಾರಿ ಅಂಶವನ್ನು ತನ್ನ ದೇಹದಲ್ಲಿ ಸಂಗ್ರಹಿಸಿ, ತನ್ನ ರಕ್ಷಣೆಗೆ ಮತ್ತು ಬೇಟೆಗೆ ಬಳಸುತ್ತದೆ.
ಈ ರೀತಿ ಸಂಗ್ರಹಿಸಿಟ್ಟ ವಿಷಕಾರಿ ಅಂಶಗಳನ್ನು ನೀಲಿ ಡ್ರ್ಯಾಗನ್ ಬಳಸಿದರೆ, ಮ್ಯಾನ್-ಓ’-ವಾರ್‌ಗಿಂತಲೂ ಮೂರು ಪಟ್ಟು ಹೆಚ್ಚು ತೀವ್ರವಾದ ನೋವು ಉಂಟಾಗಬಹುದು. ಇದು ಎಲ್ಲಾ ಕಡಲ ತೀರದಲ್ಲಿ ಕಂಡು ಬರುವುದಿಲ್ಲ ಎಂಬದು ನೆಮ್ಮದಿಯ ವಿಷಯ.
ಮುಟ್ಟಿದ್ರೆ ಏನ್ಮಾಡ್ಬೇಕು?
ನೀಲಿ ಡ್ರ್ಯಾಗನ್‌ಗಳನ್ನು ಮುಟ್ಟಿದ್ರೆ, ಉಜ್ಜಬಾರದು. ಅವು ತಾಕಿದ ಭಾಗವನ್ನು ಸಮುದ್ರದ ನೀರಿನಿಂದ ತೊಳೆಯಬೇಕು. ಚಿಮುಟ ಅಥವಾ ಕಾರ್ಡ್‌ನಿಂದ ತಾಕಿದ ಜಾಗದಲ್ಲಿರುವ ಅಂಶವನ್ನು ತೆಗೆಯಬೇಕು. ಸಮಸ್ಯೆ ಆದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.
ಸ್ಪೇನ್‌ನಲ್ಲಿ ಕಡಲ ತೀರಕ್ಕೆ ಡ್ರ್ಯಾಗನ್ ದಾಳಿ!
ಇದೀಗ ಈ ಬ್ಲ್ಯೂ ಡ್ರ್ಯಾಗನ್‌ಗಳು ಸ್ಪೇನ್‌ನ ಸಮುದ್ರ ತೀರಗಳಿಗೆ ಲಗ್ಗೆ ಇಟ್ಟಿವೆ. ಇದರಿಂದ ಬೀಚ್‌ಗಳನ್ನು ಬಂದ್ ಮಾಡಲಾಗಿದೆ. ಇಷ್ಟಾದ್ರೂ ಗೊತ್ತಿಲ್ಲದೇ ಹೋಗಿ ಅಪಾಯಕ್ಕೆ ಸಿಲುಕುವ ಪ್ರವಾಸಿಗರ ರಕ್ಷಣೆಗೆ ಅಲ್ಲಲ್ಲಿ ಕೆಂಪು ಧ್ವಜಗಳನ್ನು ನೆಟ್ಟು ʻನೀಲಿʼ ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗುತ್ತಿದೆ.
ಆ.24 ರಂದು, ನೀಲಿ ಡ್ರ್ಯಾಗನ್‌ಗಳು ಗಾರ್ಡಮರ್ ಬೀಚ್‌ಗಳಲ್ಲಿ ಪತ್ತೆಯಾಗಿದ್ದವು. ಇದಾದ ಬಳಿಕ ನೀಲಿ ಡ್ರ್ಯಾಗನ್‌ಗಳು ಮರಳಿನ ಮೇಲೆ ಕಾಣಿಸಿಕೊಂಡರೆ ಅವುಗಳನ್ನು ಮುಟ್ಟಬಾರದು ಎಂದು ಸ್ಥಳೀಯ ಪೊಲೀಸರು ಎಚ್ಚರಿಸಿದ್ದರು.
ಸದ್ಯ ಈ ನೀಲಿ ಡ್ಯಾಗನ್‌ಗಳ ಹಾವಳಿಯಿಂದ ಸ್ಪೇನ್‌ನ ಡಿಜ್, ಅಲಿಕಾಂಟೆ ಮತ್ತು ಲ್ಯಾಂಜರೋಟ್ ಬೀಚ್‌ಗಳನ್ನುಜ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ( ಜನ ನೀಲಿ ಡ್ರ್ಯಾಗನ್‌ಗಳ ಇರುವಿಕೆಯನ್ನು ಕೆಲವು ಪ್ರದೇಶಗಳಲ್ಲಿ ಅಲ್ಲಗಳೆದಿದ್ದು, ಕೆಲವು ಬೀಚ್‌ಗಳನ್ನು ತೆರೆಯಲಾಗಿದೆ.)
ಸ್ಪೇನ್‌ಗೆ ನೀಲಿ ಡ್ರ್ಯಾಗನ್‌ಗಳು ಲಗ್ಗೆ ಇಟ್ಟಿದ್ದು ಯಾಕೆ?
ನೀಲಿ ಡ್ರ್ಯಾಗನ್‌ಗಳು ಅವುಗಳ ವಿಶಿಷ್ಟ ಉಷ್ಣವಲಯದ ಸಮುದ್ರದಿಂದ ಏಕೆ ಸ್ಪೇನ್‌ನಲ್ಲಿ ಕಾಣಿಸಿಕೊಂಡಿವೆ ಎಂಬುದು ತಿಳಿದು ಬಂದಿಲ್ಲ. ಇದಕ್ಕೆ ಹವಾಮಾನ ಬದಲಾವಣೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.
ಒಂದು ನೀಲಿ ಡ್ರ್ಯಾಗನ್ ತೀರ ಪ್ರದೇಶಗಳಲ್ಲಿ 20-30 ಮೊಟ್ಟೆ ಇಡುತ್ತದೆ. ಈ ಮೂಲಕ ತಮ್ಮ ಸಂತಾನವನ್ನು ಬಹು ಬೇಗ ಹೆಚ್ಚಿಸಿಕೊಳ್ಳುತ್ತವೆ. ಸುಮುದ್ರದ ಸಾವಿರಾರು ಅಡಿಗಳ ಕೆಳಗೆ ಸಹ ಈ ಜೀವಿಗಳು ಕಂಡುಬರುತ್ತವೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಸಹ ನಡೆಯುತ್ತಿದೆ.
ನೀಲಿ ಡ್ರ್ಯಾಗನ್ ಬಗ್ಗೆ ತಜ್ಞರ ಸಲಹೆ ಏನು?
ಈ ನೀಲಿ ಡ್ರ್ಯಾಗನ್‌ಗಳು ಕಂಡು ಬಂದರೆ ಮುಟ್ಟಬಾರದು. ಅವು ದಡದಲ್ಲಿರಲಿ ಅಥವಾ ಎಲ್ಲಾದರೂ ಸಿಕ್ಕಿಬಿದ್ದಿರಲಿ, ರಕ್ಷಣೆ ಮಾಡುವ ಗೋಜಿಗೆ ಹೋಗಬಾರದು. ಅಕಸ್ಮಿಕವಾಗಿ ಮುಟ್ಟಿದರೆ ಉಪ್ಪು ನೀರಿನಿಂದ ತೊಳೆಯಬೇಕು. ಸ್ಪರ್ಶವಾದ ಜಾಗವನ್ನು ಕೈಯಿಂದ ಮುಟ್ಟದೇ ಸ್ವಚ್ಛಮಾಡಬೇಕು. ಅಲರ್ಜಿ ಮುಂದುವರಿದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಮುಟ್ಟಲೇ ಬೇಕಾದ ಪರಿಸ್ಥತಿ ಬಂದ್ರೆ ಗ್ಲೌಸ್ ಹಾಕಿ ಮುಟ್ಟಬೇಕು. ಅವು ಕಂಡು ಬಂದ ಸಮುದ್ರದಲ್ಲಿ ಈಜುವುದು, ಸ್ನಾನ ಮಾಡಬಾರದು. ಅವುಗಳು ಕಾಣಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು