LatestMain PostNational

ಶಿಕ್ಷಕರ ನೇಮಕಾತಿ ಹಗರಣ – ತೃಣಮೂಲ ನಾಯಕನ ಪತ್ನಿ, ಮಗನಿಗೆ ಅಮಾನುಷವಾಗಿ ಥಳಿತ

Advertisements

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಇಡೀ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು ಇಡಿ ಬಂಧಿಸಿದೆ. ಲಕ್ಷಗಟ್ಟಲೆ ಹಣ ಲಂಚ ಪಡೆದು ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದ್ದ ಆರೋಪ ಕೇಳಿ ಬಂದಿದ್ದು, ಹಣ ನೀಡಿದರೂ ಹಲವರಿಗೆ ಕೆಲಸ ಸಿಕ್ಕಿಲ್ಲ ಎನ್ನಲಾಗಿದೆ.

ಈ ಘಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಭಗವಾನ್‌ಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಅಲ್ಲಿಯೂ ತೃಣಮೂಲ ನಾಯಕರು ಜನರಿಗೆ ಕೆಲಸ ಕೊಡಿಸುವುದಾಗಿ ಹೇಳಿ, ಲಕ್ಷಗಟ್ಟಲೆ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಂಚ ಕೇಳಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡಿದ್ದ ನಾಯಕನ ಮೇಲೆ ಕೋಪಗೊಂಡಿದ್ದ ಜನರು ಅವರ ಮನೆಗೆ ನುಗ್ಗಿ, ಅವರ ಮಗನನ್ನು ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹೊಡೆದಿದ್ದಾರೆ. ಮಾತ್ರವಲ್ಲದೇ ನಾಯಕರ ಪತ್ನಿ ಹಾಗೂ ಪಂಚಾಯಿತಿ ಸದಸ್ಯನಿಗೂ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ – ಮಾಜಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಎಎಪಿ ಆರೋಪ

ಈ ಘಟನೆ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಬರ್ ಗ್ರಾಮದಲ್ಲಿ ನಡೆದಿದೆ. ತೃಣಮೂಲ ನಾಯಕ ಶಿವಶಂಕರ್ ನಾಯ್ಕ್ ಜನರಿಂದ ಲಂಚ ಪಡೆದಿದ್ದರು ಎನ್ನಲಾಗಿದೆ. ಆದರೆ ಆಕಾಂಕ್ಷಿಗಳಿಗೆ ಯಾವುದೇ ಉದ್ಯೋಗ ನೀಡಿರಲಿಲ್ಲ. ಪಾರ್ಥ ಚಟರ್ಜಿ ಅವರ ಎಸ್‌ಎಸ್‌ಸಿ ನೇಮಕಾತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಈ ಸಾಮಾನ್ಯ ಜನರ ಕೋಪವೂ ಹೆಚ್ಚಾಗಿದೆ.

ಉದ್ಯೋಗಾಕಾಂಕ್ಷಿಗಳು ಶನಿವಾರ ಬೆಳಗ್ಗೆ ತೃಣಮೂಲ ನಾಯಕನ ಮನೆಗೆ ನುಗ್ಗಿ, ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯವನ್ನು ನೂರಾರು ಗ್ರಾಮಸ್ಥರು ನಿಂತು ವೀಕ್ಷಿಸಿದ್ದಾರೆ. ಆದರೆ ಶಿವಶಂಕರ್ ನಾಯ್ಕ್ ಅವರು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅವರ ಮಗ, ಪತ್ನಿಯನ್ನು ಎಳೆದೊಯ್ದು ಅಮಾನುಷವಾಗಿ ಹೊಡೆದಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕದ ಗಾಯಕಿ ಮೇರಿ ಮಿಲಾಬೆನ್‌ ಅತಿಥಿ

ಈ ಬಗ್ಗೆ ಶಿವಶಂಕರ್ ನಾಯ್ಕ್ ಅವರ ಪತ್ನಿ ಭಾಗವಾನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಜನಸಾಮಾನ್ಯರನ್ನು ವಂಚಿಸಿರುವ ಆರೋಪದ ಮೇಲೆ ತೃಣಮೂಲ ನಾಯಕ ಹಾಗೂ ಪತ್ನಿ ವಿರುದ್ಧ ಮೌಖಿಕ ದೂರು ದಾಖಲಿಸಿಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button