-ವರ್ಗಾವಣೆ ದಂಧೆಗೆ ಸಿಎಂ ಪುತ್ರನನ್ನೇ ಬಿಟ್ಟಿದ್ದಾರೆ
ಉಡುಪಿ: ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಬರುತ್ತಿರುವ ಸರಣಿ ಸುದ್ದಿಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ವಿಚಲಿತರಾಗಿದ್ದು, ಕೆಲವು ಮಾಧ್ಯಮಗಳು ಕುಮಾರಸ್ವಾಮಿಗೆ ಗಂಡಾಂತರ ಕಾದಿದೆ, ಯಡಿಯೂರಪ್ಪ ಜೈಲಿಗೆ ಹೋದ ಪ್ರಸಂಗಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ ಎಂದೆಲ್ಲಾ ಹೇಳುತ್ತಿದ್ದಾರೆ. ಎಲ್ಲರಿಗೂ ಸತ್ಯದರ್ಶನ ಮಾಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊಡ್ಡ ಅಸ್ತ್ರ ಸಿಕ್ಕಿದೆ ಅಂತೆಲ್ಲಾ ಹೇಳುತ್ತಿದ್ದಾರೆ. ಅಸ್ತ್ರಗಳೆಲ್ಲಾ ನಿಶಸ್ತ್ರ ಆಗುತ್ತೆ ನೋಡುತ್ತಿರಿ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ರೀತಿಯ ತನಿಖೆಗೆ ಮುಕ್ತವಾಗಿದ್ದೇನೆ. ವೈಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು ಎಂದರು.
Advertisement
Advertisement
ಮಾತಿನ ನಡುವೆ ಸಿಎಂಗೆ ಕುಟುಕಿದ ಎಚ್‍ಡಿಕೆ ನಾನ್ಯಾಕೆ ಭಯ ಪಡಬೇಕು. ನಾನೇನೂ ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ. ಸಿದ್ದರಾಮಯ್ಯ ಸಲಹೆ ಪಡೆದು ಸಿಬಿಐಗೆ ವಹಿಸಿದ್ದಕ್ಕೆ ಯಡಿಯೂರಪ್ಪನವರಿಗೆ ಕೃತಜ್ಞತೆ ತಿಳಿಸುತ್ತೇನೆ. ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ಕುರಿತು ಸಹ ತನಿಖೆ ಆಗಲಿ ಎಂದರು.
Advertisement
ಹಿಂದಿನ ಹದಿನೈದು ವರ್ಷಗಳ ಯಡಿಯೂರಪ್ಪ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಮತ್ತು ನನ್ನ ಅವಧಿಯ ಎಲ್ಲಾ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಲಿ. ಕೇವಲ ಸಿಬಿಐ ಯಾಕೆ? ಟ್ರಂಪ್, ಪುಟೀನ್ ಗೆ ಹೇಳಿ ತನಿಖೆ ಮಾಡಿಸಿ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಯಲಹಂಕ ತಹಶೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು? ಹೇಳಿ. ನಮಗೆ ವರ್ಗಾವಣೆ ಲೂಟಿ ಅಂತೀರಿ, ನೀವೇನು ಮಾಡುತ್ತಿದ್ದೀರಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪನವರು ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಸಂತ್ರಸ್ತರ ವಿಚಾರದಲ್ಲಿ ಸರ್ಕಾರದ ನಿಲುವೇನು?
ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಯಾವ ರೀತಿಯ ನೆರವು ನೀಡುತ್ತೆ ಸ್ಪಷ್ಟಪಡಿಸಲಿ. ಜನರಲ್ಲಿ ಮೊದಲು ವಿಶ್ವಾಸ ಮೂಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬಿಜೆಪಿಯ ಕೇಂದ್ರ ನಾಯಕರು ಪ್ರವಾಸ ಮಾಡಿ ಹೋದರು. ಇಲ್ಲಿಯವರೆಗೆ ಏನೂ ನೆರವು ಕೊಟ್ಟಿಲ್ಲ. ಬಿಜೆಪಿ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ರಾಜ್ಯ ಸಂಕಷ್ಟದಲ್ಲಿರುವಾಗ ಸರ್ಕಾರದ ಕುರಿತು ಟೀಕೆ ಸರಿಯಲ್ಲ ಅಂತ ಸುಮ್ಮನಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ ಕಳೆದ 25 ದಿನದಿಂದ ಸಚಿವ ಸಂಪುಟವೇ ಇಲ್ಲ. ಕೊನೆಗೂ ಬಿಜೆಪಿ ಹೈಕಮಾಂಡ್ ವಿಸ್ತರಣೆಗೆ ಅವಕಾಶ ಕೊಟ್ಟಿದೆ. ಮಳೆ ಅನಾಹುತಕ್ಕೆ ರಾಜ್ಯದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ರಾಜ್ಯ ಹಲವಾರು ಸವಾಲು ಎದುರಿಸುತ್ತಿದೆ. ಮೈತ್ರಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದು ಪಾಪದ ಸರ್ಕಾರ ಅಂತ ಜನರಲ್ಲಿ ಭಾವನೆ ಮೂಡಿಸಿದರು. ಒಂದು ವರ್ಗದ ಮಾಧ್ಯಮಗಳು ಸರ್ಕಾರ ಅಸ್ಥಿರಗೊಳಿಸಲು ಪಣ ತೊಟ್ಟವು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದು ಯಾವುದೇ ಸ್ಪಷ್ಟತೆ ಇಲ್ಲದ ಸರ್ಕಾರ ಎಂದು ಕುಮಾರಸ್ವಾಮಿ ಟೀಕಿಸಿದರು.