ಕಾರವಾರ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ವೀನುಗಾರಿಕೆ ಬೋಟ್ ನಲ್ಲಿದ್ದ ಕುಮಟಾ ತಾಲೂಕು ಮಾದನಗೆರೆ ಸತೀಶ್, ಈಶ್ವರ, ಹರಿಕಂತ್ರ ಮನೆಗೆ ಸಚಿವರು ಇಂದು ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಸೆಂಬರ್ 13ರಂದು ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಏಳು ಮೀನುಗಾರರಿದ್ದ ಬೋಟ್ 2018ರ ಡಿ.15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು, ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಉಪಗ್ರಹ ಮೂಲಕ ಪತ್ತೆಗೆ ಇಸ್ರೋಗೂ ಮನವಿ ಮಾಡಲಾಗಿದೆ” ಎಂದು ಹೇಳಿದರು.
Advertisement
Advertisement
ಈ ಪ್ರಕರಣ ಸಂಬಂಧ ಡಿ. 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ
Advertisement
Advertisement
ಈಗಾಗಲೇ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ. ಅಲ್ಲದೇ ಗೂಗಲ್ ಸೇರಿದಂತೆ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು. ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ ಇದೆ. ಬೋಟ್ ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದು, ಶೀಘ್ರವೇ ನಿರೀಕ್ಷಿತ ಫಲಶೃತಿಗೆ ಎದುರು ನೋಡುತ್ತಿದ್ದೇವೆ ಅಂದ್ರು. ಸಚಿವರಿಗೆ ಸ್ಥಳೀಯ ಶಾಸಕ ದಿನಕರ್ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಎಸ್. ಪಾಟೀಲ್ ಸೇರಿದಂತೆ ವಿವಿಧ ಪ್ರಮುಖರು ಈ ಸಂದರ್ಭದಲ್ಲಿ ಸಾಥ್ ನೀಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv