ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

Public TV
2 Min Read
trupti shabarimala

ಮುಂಬೈ: ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

ನವೆಂಬರ್ 20ರ ನಂತರ ನಾನು ಶಬರಿಮಲೆಗೆ ಹೋಗುತ್ತೇನೆ. ನಾವು ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಅವರಿಗೆ ಬಿಟ್ಟದ್ದು. ರಕ್ಷಣೆ ಒದಗಿಸದಿದ್ದರೂ ನಾನು ದರ್ಶನಕ್ಕಾಗಿ ಶಬರಿಮಲೆಗೆ ಭೇಟಿಯೇ ನೀಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.

shabarimala

ಶಬರಿಮಲೆ ದೇವಸ್ಥಾನವನ್ನು ತೆರೆಯುವ ಮುನ್ನ ಕೇರಳ ದೇವಸ್ವಂ ಮಂಡಳಿ ಸಚಿವ ಕೆ.ಸುರೇಂದ್ರನ್ ಈ ಕುರಿತು ಪ್ರತಿಕ್ರಿಯಿಸಿ, ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರ್ಕಾರ ರಕ್ಷಣೆ ನೀಡುವುದಿಲ್ಲ. ರಕ್ಷಣೆ ಅಗತ್ಯವಿರುವವರು ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ತಿಳಿಸಿದರು.

ತೃಪ್ತಿ ದೇಸಾಯಿ ಅವರಂಥ ಕಾರ್ಯಕರ್ತರು ತಮ್ಮ ಬಲ ತೋರಿಸುವ ಸ್ಥಳವನ್ನಾಗಿ ದೇವಸ್ಥಾನವನ್ನು ನೋಡಬಾರದು. ರಾಜ್ಯ ಸರ್ಕಾರವು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಕ್ಷಣೆ ನೀಡುವುದಿಲ್ಲ. ಅವರಿಗೆ ಪೊಲೀಸ್ ರಕ್ಷಣೆ ಬೇಕಾದರೆ ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

ತನ್ನ ಆದೇಶವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ನ.14ರಂದು ತೀರ್ಪು ನೀಡಿದೆ. ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬೇಕೇ ಬೇಡವೇ ಎಂಬುದರ ಕುರಿತು 3:2 ಅನುಪಾತದಲ್ಲಿ ತೀರ್ಪು ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಳು ಸದಸ್ಯರಿರುವ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಎಲ್ಲದರ ಮಧ್ಯೆ ಸಚಿವರು ಈ ಹೇಳಿಕೆ ನೀಡಿದ್ದಾರೆ.

Supreme Court of India

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠವು ಸೆಪ್ಟೆಂಬರ್ 2018ರಂದು ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ನಂತರ ತೀರ್ಪನ್ನು ಮರು ಪರಿಶೀಲಿಸುವಂತೆ ಹಲವು ಅರ್ಜಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ 7 ಸದಸ್ಯರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

ಮರು ಪರಿಶೀಲನಾ ಅರ್ಜಿಯಲ್ಲಿ ಜನರ ನಂಬಿಕೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಅಲ್ಲದೆ ದೇವಾಲಯದ ದೇವತೆ ಬ್ರಹ್ಮಚಾರಿ ಹಾಗೂ ಮುಟ್ಟಾದ ಮಹಿಳಾ ಆರಾಧಕರ ಪ್ರವೇಶದಿಂದ ಶತಮಾನಗಳಷ್ಟು ಹಳೆಯ ನಂಬಿಕೆಗೆ ಧಕ್ಕೆಯಾಗಲಿದೆ ಎಂದು ವಾದಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *