2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

Public TV
2 Min Read
Ram Mandir 1

– ಧರ್ಮಸಂಸದ್ ನಲ್ಲಿ ರಾಮಮಂದಿರ ಕಹಳೆ
– ಪರ್ಯಾಯ ನಂತರ ನಾನು ದೈಹಿಕವಾಗಿಯೂ ಹೊರಾಟಕ್ಕಿಳಿಯುತ್ತೇನೆಂದ ಪೇಜಾವರ ಶ್ರೀ

ಉಡುಪಿ: ಬಾಬ್ರೀ ಮಸೀದಿ ಧ್ವಂಸವಾಗಿ 25 ವರ್ಷಗಳೇ ಕಳೆದಿವೆ. ಇನ್ನೂ ನಾವು ಕಾಯುವುದರಲ್ಲಿ ಅರ್ಥವಿಲ್ಲ. ಸಂಘ ಪರಿವಾರದ ಸ್ವಯಂ ಸೇವಕರು ತುಂಬಾ ಆಸೆಯಿಂದ ರಾಮ ಮಂದಿರ ಕಟ್ಟೋದು ಯಾವಾಗ ಅಂತಾ ಕೇಳ್ತಾರೆ. ಸ್ವಯಂ ಸೇವಕರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ. ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ. 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಆರ್‍ಎಸ್‍ಎಸ್ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

Ram Mandir 2

ರಾಮಮಂದಿರದ ವಿಜಯ ನಿಶ್ಚಿತವಾಗಿದ್ದು, ಹಿಂದೂ ದೇಶದ ದಿಗ್ಧರ್ಶನ ಉಡುಪಿಯಲ್ಲಿ ಆಗಿದೆ. ಧರ್ಮ ಸಂಸದ್ ನಂತರ ಹಿಂದೂ ಸಮಾಜ ಒಂದು ಹೆಜ್ಜೆ ಮುಂದಿಟ್ಟು, ನಮ್ಮ ಹೋರಾಟ ವಿಜಯದತ್ತ ಸಾಗಬೇಕಿದೆ. ಮಂದಿರದ ವಿಜಯ ಸಾಧಿಸದೇ ನಾವು ಸುಮ್ಮನೆ ಕೂರುವವರಲ್ಲ. ಸಾಮಾಜಿಕ ಸಾಮರಸ್ಯ ನಮ್ಮ ಮೇಲೆ ಮಾತ್ರವಲ್ಲದೇ ಎಲ್ಲ ವರ್ಗಕ್ಕೂ ಸೀಮಿತವಾಗಬೇಕಿದೆ. ಗೋರಕ್ಷಣೆಯ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು, ಗೋ ಹತ್ಯೆ ನಿಷೇಧ ಆಗುವರೆಗೂ ನಮಗೆಲ್ಲರಿಗೂ ನೆಮ್ಮದಿ ಇಲ್ಲ. ಮತಾಂತರ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಆಯೋಧ್ಯೆಯಲ್ಲಿ ಬೇರೆ ಕಟ್ಟಡಗಳು ಬೇಡ: ಆಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಬೇಕು. ಅಲ್ಲಿ ಬೇರೆ ಯಾವುದೇ ಕಟ್ಟಡಗಳು ಬರಬಾರದು. ಅದೇ ಕಲ್ಲುಗಳಿಂದ ರಾಮಮಂದಿರ ಕಟ್ಟಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ, ಹಿಂದೂ ದೇಶ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಎಲ್ಲರೂ ಜೈಕಾರ ಕೂಗಲು ಸಿದ್ಧರಾಗಿರಿ ಎಂದು ಭಾಗವತ್ ಹೇಳಿದ್ರು.

Ram Mandir 3

ಸುತ್ತೂರು ಶ್ರೀಗಳು ಮಾತನಾಡಿ, ಧರ್ಮ ಸಂಸದ್ ನ ಆಶಯಗಳು ಈಡೇರಬೇಕಾದರೆ ಸಂತರ ನಿರ್ಣಯಗಳು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಭಾರತ ವಿಜ್ಞಾನಿ-ತತ್ವಜ್ಞಾನಿಗಳ ದೇಶ, ಭಾರತದ ಸಂಸ್ಕೃತಿ- ಭಾಷೆ ಅನನ್ಯವಾದದ್ದು. ನಾವೀಗ ನ್ಯೂಕ್ಲಿಯರ್ ಯುಗದಲ್ಲಿದ್ದೇವೆ. ಮಾತಿನಲ್ಲಿ ಬಗೆಹರಿಯುವ ವಿಚಾರ ಯುದ್ಧಕ್ಕೆ ತಿರುಗುತ್ತಿದೆ. ಅಸ್ಪೃಶ್ಯತೆ, ಜಾತಿಪದ್ಧತಿ ಹಿಂದೂ ಧರ್ಮದಿಂದ ದೂರವಾಗಿ ಮಹಿಳೆಯರ ಸ್ಥಿತಿ ಬದಲಾಗಬೇಕು ಎಂದರು.

ಇದೇ ವೇಳೆ ಪೇಜಾವರ ಶ್ರೀಗಳು ಮಾತನಾಡಿ, ಇದು ಧರ್ಮ ಸಂಸದ್ ಮಾತವಲ್ಲ, ಕ್ಷೀರ ಸಮುದ್ರದ ಮಂಥನವಾಗುತ್ತಿದೆ. ಅಸ್ಪೃಶ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಒಂದು ನಿಯಮ, ಬಹುಸಂಖ್ಯಾತರಿಗೆ ಬೇರೆಯೇ ಕಾನೂನುಗಳಿವೆ. ಜಾತ್ಯಾತೀತ ಪಕ್ಷಗಳು ಸಮಾಜವನ್ನು ಒಡೆಯುತ್ತಿದ್ದು ಭಾರತದ ಸಂವಿಧಾನ ಬದಲಾಗಬೇಕಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ತರುವ ಸರ್ಕಾರ ಬರಬೇಕಿದೆ. 2019 ರೊಳಗೆ ರಾಮ ಮಂದಿರ ಆಗೋದು ನಿಶ್ಚಿತವಾಗಿದೆ. ದೇಶ ರಾಮಮಂದಿರ ನಿರ್ಮಾಣದ ವಾತಾವರಣವನ್ನು ಹೊಂದಿದೆ. ರಾಮಮಂದಿರ ನಿರ್ಮಾಣ ವಿಚಾರಕ್ಕೆ ಕೃಷ್ಣನ ಅನುಗ್ರಹವಿದೆ. ಪರ್ಯಾಯ ನಂತರ ನಾನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹೋರಾಟಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.

Ram Mandir 5

udupi dharma sansad 2

udupi dharma sansad 3

udupi dharma sansad 4

 

Share This Article
Leave a Comment

Leave a Reply

Your email address will not be published. Required fields are marked *