ಬೆಂಗಳೂರು: ನಾವು ನಮ್ಮ ಧರ್ಮದಲ್ಲಿ ಅರಳಿ ಮರ, ಬೇವಿನ ಮರ, ಬನ್ನಿ ಮರಕ್ಕೆ ಪೂಜೆ ಮಾಡುತ್ತೇವೆ. ಪ್ರಾಣಿಗಳನ್ನು ದೇವರ ವಾಹನಗಳೆಂದು ಪರಿಗಣಿಸಿದ್ದೇವೆ. ಇವುಗಳನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ಅರಮನೆ ಮೈದಾನದಲ್ಲಿ ಬುಧವಾರ (ನ.19) ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪರಿಸರ, ನೀರು, ಗಾಳಿ, ಬೆಳಕು ಶಾಶ್ವತವಾಗಿ ಇರುತ್ತವೆ. ನಾವುಗಳು ಇರಲಿ, ಇಲ್ಲದಿರಲಿ, ಇವುಗಳು ಹಾಗೆಯೇ ಇರುತ್ತವೆ. ನೀರು, ಗಾಳಿಗೆ ಬಣ್ಣ ಇಲ್ಲ. ನಾವು ಇವುಗಳನ್ನು ಕಾಪಾಡಿಕೊಂಡು ಹೋಗಬೇಕು. ಪ್ರಕೃತಿ ನಿಯಮ ಎಲ್ಲರಿಗೂ ಒಂದೇ. ಸೂರ್ಯ ಹುಟ್ಟುವುದು, ಮುಳುಗುವುದು, ಗಾಳಿ ಯಾವ ದಿಕ್ಕಿನಲ್ಲಿ ಬೀಸಬೇಕು ಎಲ್ಲವೂ ಪ್ರಕೃತಿ ನಿಯಮ. ನಮ್ಮ ಕಾಲದಲ್ಲಿ ಬಾವಿ ಹಾಗೂ ಹೊಳೆಯಲ್ಲಿ ನೀರನ್ನು ತರುತ್ತಿದ್ದೆವು. ಈಗ ಒಂದು ಬಾಟೆಲ್ ನೀರು 30-40 ರೂ. ಲೀಟರ್ ಆಗಿದೆ. ಪರಿಶುದ್ಧ ನೀರು ಇಲ್ಲವಾದರೆ ನಾವು ಇರಲು ಸಾಧ್ಯವಿಲ್ಲ ಎಂದರು.ಇದನ್ನೂ ಓದಿ: ಮೀಸಲಾತಿ ಪ್ರಮಾಣವನ್ನು 70-75% ಗೆ ಹೆಚ್ಚಳ ಮಾಡೋದು ನನ್ನ ಇಚ್ಛೆ: ಸಿದ್ದರಾಮಯ್ಯ
ನಾನು ಮೊನ್ನೆ ಮೂರು ದಿನ ದೆಹಲಿಗೆ ಹೋಗಿದ್ದೆ. ಆಗ ನನ್ನ ಪಿಎ ಎದೆ ಬಳಿ ಒಂದು ಪುಟ್ಟ ಯಂತ್ರ ಹಾಕಿದ್ದ, ನಾನು ಏನದು ಎಂದು ಕೇಳಿದೆ. ಅದಕ್ಕೆ ಅವರು ಇದು ಏರ್ ಪ್ಯೂರಿಫೈಯರ್ ಎಂದು ಹೇಳಿದರು. ದೆಹಲಿಯ ಗಾಳಿ ಸೇವಿಸಿದರೆ ಒಂದು ದಿನಕ್ಕೆ 14 ಸಿಗರೇಟ್ ಸೇದುವುದಕ್ಕೆ ಸಮವಾಗುವಷ್ಟು ಅಲ್ಲಿನ ವಾಯುಮಾಲಿನ್ಯ ಪರಿಸ್ಥಿತಿ ಇದೆ. ನಾವು ಬಹಳ ಪುಣ್ಯವಂತರು. ನಾವು ಪರಿಸರ ಕಾಪಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೊಂದಿಗೆ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
ನಾವು ಒಂದು ದಿನ ಇತಿಹಾಸದ ಪುಟ ಸೇರುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ, ನೀರು, ಗಾಳಿ ಮತ್ತು ಬೆಳಕು ಇಲ್ಲೇ ಉಳಿಯುತ್ತವೆ. ಆದ್ದರಿಂದ,… pic.twitter.com/O4krX3n60W
— DK Shivakumar (@DKShivakumar) November 19, 2025
ಸಚಿವ ಈಶ್ವರ್ ಖಂಡ್ರೆ ಹಾಗೂ ನರೇಂದ್ರ ಸ್ವಾಮಿ ಅವರು ಈ ಇಲಾಖೆಗೆ ಹೊಸ ಮೆರಗು ನೀಡಿದ್ದಾರೆ. ನಾನು, ಸಿಎಂ ಏನೇ ಹೇಳಿದರೂ, ಸ್ವಲ್ಪ ಸಡಿಲ ಮಾಡಿ ಎಂದರೂ ಖಂಡ್ರೆ ಅವರು ನಮ್ಮ ಮಾತು ಕೇಳುವುದಿಲ್ಲ. ಅರಣ್ಯ ಸಂಪತ್ತಿನ ರಕ್ಷಣೆ ಬಗ್ಗೆ ಬಹಳ ಕಾಳಜಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳಿಗಿಂತ ಹೆಚ್ಚಿನ ಆಸಕ್ತಿ ಇದೆ. ಹಸಿರಿನ ರಕ್ಷಣೆಗೆ ಅವರು ಪಣ ತೊಟ್ಟಿದ್ದಾರೆ ಎಂದರು.
ಪ್ರಾಣಿಗಳ ಪೈಕಿ ಹುಲಿ ಮಹದೇಶ್ವರನ ವಾಹನ, ನವಿಲು ಸುಬ್ರಮಣ್ಯನ ವಾಹನ ಎಂದು ಪರಿಗಣಿಸುತ್ತೇವೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸಗಣಿಗೆ ಗರಿಕೆ ಹುಲ್ಲು ಸೇರಿಸಿ ಗಣೇಶ ಎಂದು ನಾವು ಪೂಜೆ ಮಾಡುತ್ತೇವೆ. ನಮ್ಮ ಪ್ರಕೃತಿಯಲ್ಲಿ ನಾವು ಎಲ್ಲವನ್ನು ಪೂಜಿಸಿಕೊಂಡು ಬರುತ್ತೇವೆ. ಇವುಗಳನ್ನು ಕಾಪಾಡಿಕೊಳ್ಳುವುದೇ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲಸ. ಇಂದಿರಾಗಾಂಧಿ ಅವರು ಈ ಇಲಾಖೆ ಸ್ಥಾಪಿಸಿ 50 ವರ್ಷಗಳಾಗಿವೆ. ಅವರ ಜನ್ಮದಿನದಂದು ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಆಚರಿಸುತ್ತಿರುವುದು ಬಹಳ ವಿಶೇಷ ಎಂದು ಹೇಳಿದರು.ಇದನ್ನೂ ಓದಿ: ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ನಿರ್ಧಾರ: ಗುಡುಗಿದ ವಿಜಯೇಂದ್ರ

