ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರೈತರಿಗೆ ಸಾಲ ವಿತರಣೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ ನಡೆದಿದೆ. ಸಾಲ ವಿತರಣೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಘಟನೆಯ ಕುರಿತು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣನ ಕ್ಷೇತ್ರದಲ್ಲಿ ಮತದಾರರಿಗೆ ಸಾಲದ ರೂಪದಲ್ಲಿ ಆಮಿಷ ಒಡ್ಡುತ್ತಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಶಾಸಕ ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕಾರಣ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನಲಾಗಿದೆ.
Advertisement
Advertisement
ಮಧುಗಿರಿ ತಾಲೂಕಿನ ಕಡಗತ್ತೂರು ವಿಎಸ್‍ಎಸ್‍ಎನ್ ಬ್ಯಾಂಕ್ ನಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಚೆಕ್ ಅಥವಾ ಆರ್ ಟಿಜಿಎಸ್ ಮೂಲಕ ನೀಡಬೇಕಿದ್ದ ಸಾಲವನ್ನು ನಗದು ರೂಪದಲ್ಲಿ ಕೊಟ್ಟು ಕಾಂಗ್ರೆಸ್ ಗೆ ಮತಹಾಕುವಂತೆ ಹೇಳಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.
Advertisement
ಜಮೀನಿನ ಪಹಣಿ ಹೊಂದಿರುವ ಕಾಂಗ್ರೆಸ್ ಬೆಂಬಲಿತ ರೈತರಿಗೆ ಮಾತ್ರ ಹಳೇ ದಿನಾಂಕ ನಮೂದಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ವಿಎಸ್‍ಎಸ್‍ಎನ್ ಅಧಿಕಾರಿಗಳ ಜಾಣ ನಡೆಗೆ ಮುಂದಾಗಿದ್ದಾರೆ. ರೈತರಿಗೆ ಸಾಲ ನೀಡುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.