ಟೆಲ್ ಅವಿವ್: ಅಗತ್ಯ ಬಿದ್ದರೆ ಭಾರತದೊಂದಿಗೆ (India) ನಾವು ನಿಲ್ಲುತ್ತೇವೆ ಎಂದು ಇಸ್ರೇಲ್ (Israel) ವಿದೇಶಾಂಗ ಸಚಿವಾಲಯದ ವಕ್ತಾರ ಓರೆನ್ ಮಾರ್ಮೊರ್‌ಸ್ಟೈನ್ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ಪತ್ರಕರ್ತರೊಂದಿಗಿನ ಸಂವಾದದ ವೇಳೆ, ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧದ ಬಗ್ಗೆ ಅವರು ಮಾತಾಡಿದರು. ಈ ವೇಳೆ, ಇಸ್ರೇಲ್ ಭಾರತದ ಸ್ನೇಹಿತ, ಸ್ನೇಹಿತರು ಅಗತ್ಯದ ಸಮಯದಲ್ಲಿ ಪರಸ್ಪರ ಜೊತೆಗೆ ನಿಲ್ಲಲಿವೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಹಿನ್ನೆಲೆಯಲ್ಲಿ ಅವರು ಭಾರತವನ್ನು ಬೆಂಬಲಿಸಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್ ಮಧ್ಯೆ ಗುಂಡಿನ ಚಕಮಕಿ
ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಉಗ್ರರ ದಾಳಿಯ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದ ತೀವ್ರ ದುಃಖಿತನಾಗಿದ್ದೇನೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಭಾರತದೊಂದಿಗೆ ಜೊತೆಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದರು. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ತಾನು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಏ. 24ರಂದು ಸರ್ವಪಕ್ಷಗಳ ಸಭೆಯನ್ನು ನಡೆಸಿತ್ತು.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಇಸ್ರೇಲ್ ಬೆಂಬಲದಿಂದ ಭಾರತಕ್ಕೆ ಬಲ ಬಂದಿದೆ. ಇದನ್ನೂ ಓದಿ: ಬಿಡುಗಡೆ ಮಾಡದೇ ಬಿಎಸ್‌ಫ್ ಯೋಧನನ್ನು ಪ್ರಚಾರಕ್ಕೆ ಬಳಸಲು ಮುಂದಾದ ಪಾಕ್