Dakshina Kannada
ತಲ್ವಾರ್ ಹಿಡಿದು ಗೋಕಳ್ಳತನ ಮಾಡೋರಿಗೆ, ಅದೇ ತಲ್ವಾರ್‌ನಿಂದ ಉತ್ತರ ಕೋಡೋಕೆ ನಮ್ಗೆ ಗೊತ್ತು: ಬಿಜೆಪಿ ಶಾಸಕ
– ಗೋಕಳ್ಳರ ಮಾತು ಕೇಳಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್
ಮಂಗಳೂರು: ಅಕ್ರಮ ಗೋಸಾಗಾಟ ಪತ್ತೆಹಚ್ಚಿದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದಕ್ಕೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಠಾಣೆಗೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾರ್ಯಕರ್ತರ ಜೊತೆಯಲ್ಲಿ ರಾತ್ರಿಯಿಡಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಿಂದೂ ಸಂಘಟನೆ ಕಾರ್ಯಕರ್ತರು ಕಾನೂನಿನ ಪ್ರಕಾರ ಪೊಲೀಸರಿಗೆ ಗೋಕಳ್ಳರನ್ನು ಒಪ್ಪಿಸಿದ್ದಾರೆ. ಆದರೆ ಪೊಲೀಸರೇ ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಿರುವುದು ಸರಿಯಲ್ಲ. ಇತ್ತೀಚಿಗೆ ಅಕ್ರಮ ಗೋವು ಸಾಗಾಟಕ್ಕೆ ಕೆಲವರು ಬೆಂಬಲ ನೀಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದರು.
ನಾನು ಶಾಸಕನಾಗುವ ಮೊದಲು ಒಬ್ಬ ಹಿಂದೂ. ಇಲ್ಲಿರುವ ಕಾರ್ಯಕರ್ತರು ಹಾಗೂ ನಾವು ಹಿಂದೂತ್ವವನ್ನು ಕಾಪಾಡಲು ಹಾಗೂ ಗೋ ರಕ್ಷಣೆಗಾಗಿ ಪ್ರಾಣಾ ಕೊಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಗೋಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ಎಲ್ಲದಕ್ಕೂ ಸಿದ್ಧರಿಗಿದ್ದೇವೆ. ತಲ್ವಾರ್ ಹಿಡಿದು ಗೋಕಳ್ಳತನ ಮಾಡುವವರಿಗೆ, ಅದೇ ತಲ್ವಾರ್ ಹಿಡಿದು ಉತ್ತರ ಕೋಡೋಕೆ ನಮಗೆ ಗೊತ್ತಿದೆ. ಈ ರೀತಿ ನಡೆದರೆ ಖಂಡಿತ ಇದು ದಕ್ಷಿಣ ಕನ್ನಡ ಶಾಂತಿ ಕದಡುತ್ತದೆ ಎಂದು ಹೇಳಿದ್ದಾರೆ.
ಯಾವತ್ತಿನಿಂದ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಯು.ಟಿ.ಖಾದರ್ ಆದರೋ ಅವತ್ತಿನಿಂದ ಈ ಅಕ್ರಮಗಳು ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಹಾಗೂ ಪೊಲೀಸರು ಕ್ರಮ ಕೈಗೊಳ್ಳದೆ ಗಲಾಟೆ ನಡೆದು, ಜಿಲ್ಲೆಯ ಶಾಂತಿ ಕದಡಿದರೆ ಉಸ್ತುವಾರಿ ಸಚಿವ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.
ಗುರುವಾರ ತಡರಾತ್ರಿ ಬೆಳ್ತಂಗಡಿ ತಾಲೂಕಿನ ಬಂದರು ಬಳಿ ಮೂರು ಹಸುಗಳನ್ನು ಟೆಂಪೋದಲ್ಲಿ ಅಮಾನುಷ ರೀತಿಯಲ್ಲಿ ಕಟ್ಟಿ ಒಯ್ಯಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ವಾಹನವನ್ನು ಕೆಲ ಹಿಂದು ಸಂಘಟನೆ ಕಾರ್ಯಕರ್ತರು ನಿಲ್ಲಿಸಿ, ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಠಾಣೆಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಗೋವಿನ ಸಾಗಾಟ ಮಾಡ್ತಿದ್ದವರ ಮೇಲೆ ಪ್ರಕರಣ ದಾಖಲಿಸುವ ಬದಲು ಅವರ ಮಾತನ್ನು ಮಾತು ಕೇಳಿ, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.