ಬೆಂಗಳೂರು: ವಿಧಾನ ಪರಿಷತ್‌ನಲ್ಲಿ (Vidhana Parishad) ಉತ್ತರ ನೀಡಲು ಕಾಲಾವಕಾಶ ಕೋರಿದ ಘಟನೆ ಸದನದಲ್ಲಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವೆ ಮಾತಿನ ಚಕಮಕಿ, ಗದ್ದಲ ಗಲಾಟೆ ಸೃಷ್ಟಿಗೆ ಕಾರಣವಾಯಿತು. ಆರೋಪ ಪ್ರತ್ಯಾರೋಪಗಳಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು 5 ನಿಮಿಷ ಮುಂದೂಡಿದ ಘಟನೆ ನಡೆಯಿತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಅಶೋಕ್ ಸಮಯಾವಕಾಶ ಕೋರಿದರು. ಬಹಳ ವಿಷಯ ಕೇಳಿದ್ದಾರೆ ಅದಕ್ಕಾಗಿ ಸಮಯ ಬೇಕು ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಲೀಂ ಅಹಮದ್ ಉತ್ತರವಿಲ್ಲದಿದ್ದರೆ ಪಟ್ಟಿಯಲ್ಲಿ ಯಾಕೆ ಹಾಕಬೇಕಿತ್ತು? ಉತ್ತರ ಕೊಡಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸರ್ಕಾರದ ಬಳಿ ಉತ್ತರವಿಲ್ಲ ಎಂದರೆ ಹೇಗೆ? ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಆದರೆ ಸಭಾಪತಿಗಳು ಸಮಯಾವಕಾಶಕ್ಕೆ ಒಪ್ಪಿ ಮುಂದಿನ ಪ್ರಶ್ನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಕ್ಕೆ ಸಿಟ್ಟಾದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಇದು ಬೇಜವಾಬ್ದಾರಿತನದ ಪರಮಾವಧಿ ಎಂದರು. ಇದಕ್ಕೆ ದನಿಗೂಡಿಸಿದ ಸಚಿವ ಸುಧಾಕರ್, ಹಿಂದೆ ಇವರೆಲ್ಲಾ ಏನು ಮಾಡಿದ್ದರು ಎಂದು ಕಡತ ತರಿಸಿ ನೋಡಿ ಎಂದರು. ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ಸಚಿವರದ್ದು ಬೇಜವಾಬ್ದಾರಿ ಹೇಳಿಕೆ. ಇದು ಸಚಿವರ ಪಲಾಯನವಾದ. ಅವರಿಗೆ ಉತ್ತರ ಕೊಡಲು ಸಾಧ್ಯವಾಗದೆ ಹೀಗೆ ಮಾಡುತ್ತಿದ್ದಾರೆ ಎಂದರು.
Advertisement
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿಗಳು ಸಚಿವರು ಉತ್ತರ ಕೊಡಬೇಕು, ಇದು ಪ್ರತಿಪಕ್ಷದ ಹಕ್ಕು. ಆದರೆ ಕಾಲಾವಕಾಶ ಬೇಕಾದಾಗ ಕೊಡಬೇಕಾಗಲಿದೆ ಎಂದರು. ಸಭಾಪತಿ ಹೇಳಿಕೆ ಸಮರ್ಥಿಸಿಕೊಂಡ ಅಶೋಕ್, 6 ವಿಷಯ ಕೇಳಿದ್ದಾರೆ. ಭೂ ಮಂಜೂರಾತಿ ಯಾರಿಗೆ ಎಂದು ಕೇಳಿಲ್ಲ. ಯಾವ ದಿನಾಂಕ ಎಂದಿಲ್ಲ. ಪೂರ್ತಿ ಕೊಡಬೇಕು. ಭೂ ಪರಿವರ್ತನೆ ರಾಜ್ಯದ ಪೂರ್ತಿ ಕೇಳಿದ್ದಾರೆ. ಆದಾಯ, ಜನನ, ಮರಣ, ಪಿಂಚಣಿ ಇಡೀ ರಾಜ್ಯದ್ದು ಕೇಳಿದ್ದಾರೆ ಇದು ಕೊಡಲು ಸಾಧ್ಯವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಬ್ ಅರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ
Advertisement
ಇದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಲಂಚದ ಪ್ರಕರಣ ಅವರಿಗೆ ಹೇಳಲಾಗುತ್ತಿಲ್ಲ. ಬಹಳ ಲಂಚ ಪಡೆದಿದ್ದಾರೆ. ಅದಕ್ಕೆ ಸಮಯ ಬೇಕು ಎನ್ನುತ್ತಿದ್ದಾರೆ ಎಂದರು. ಇದಕ್ಕೆ ಟಾಂಗ್ ನೀಡಿದ ಸಚಿವ ಅಶೋಕ್, ಲಂಚದ ವಿಚಾರ ಕೇಳಿದರೆ ಅದಕ್ಕೆ ಉತ್ತರ ಕೊಡಲು ಸಿದ್ದ ಎಂದರು.
ಈ ವೇಳೆ ಬಿಜೆಪಿ ಸದಸ್ಯರಿಂದ ರಾಜೀವ್ ಗಾಂಧಿ ಹೇಳಿಕೆ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಕೆ ಹರಿಪ್ರಸಾದ್, 100 ರೂ. ಬಿಡುಗಡೆ ಆದರೆ ಕಡೆಯ ಹಳ್ಳಿಗೆ ತಲುಪುವ ವೇಳೆ 15 ರೂ. ಆಗಿರಲಿದೆ. ಶಾಸಕರ ನಿಧಿ 15 ಲಕ್ಷ ಎಂದರೆ, 12 ಲಕ್ಷ ಮಾತ್ರ ಸಿಗೋದು. ಉಳಿದ 3 ಲಕ್ಷ ತೆರಿಗೆ ಇತ್ಯಾದಿಗೆ ಹೋಗಲಿದೆ. ಈ ಅರ್ಥದಲ್ಲಿ ರಾಜೀವ್ ಗಾಂಧಿ ಅಂದು ಹೇಳಿದ್ದರು ಎಂದು ರಾಜೀವ್ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡರು. ದೇವಸ್ಥಾನದ ಹಣ ಹೊಡೆದವರು ಯಾರು ಎಂದು ಗೊತ್ತಿದೆ ಎಂದು ಬಿಜೆಪಿ ಸದಸ್ಯರಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ – ಒಪ್ಪಿಕೊಂಡ ಸರ್ಕಾರ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸೋಮಣ್ಣ, ಹತ್ತಾರು ಪ್ರಶ್ನೆ ಕೇಳುವ ವೇಳೆ ಒಂದೋ ಎರಡೋ ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದರೆ ಸಹಕಾರ ಅಗತ್ಯ. ನಿಮ್ಮ ಕಾಲ ಈ ಕಾಲ ಎಲ್ಲಾ ವೇಳೆಯಲ್ಲೂ ಇದು ನಡೆದುಕೊಂಡು ಬಂದಿದೆ. ಪ್ರತಿಷ್ಠೆಯಾಗಿ ಪರಿಗಣಿಸದೆ ಸಹಕರಿಸಿ ಎಂದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, ನೀವು ಒಳ್ಳೆಯ ಸಂಪ್ರದಾಯ ಹಾಕಿಕೊಟ್ಟಿದ್ದರೆ ನಾವು ಅದನ್ನು ಪಾಲಿಸುತ್ತಿದ್ದೆವು. ಈ ಪ್ರಶ್ನೆಯಲ್ಲಿ ಲಂಚದ ವಿಷಯ ಇದೆ ಅದನ್ನು ವಿಷಯಾಂತರ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಅಶ್ವಥ್‌ನಾರಾಯಣ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿಲ್ಲ. ಭ್ರಷ್ಟಾಚಾರ ಮುಗಿಸಲು ನಾವು ಬಂದಿದ್ದೇವೆ ಎಂದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಸಭಾಪತಿಗಳು ಸದನವನ್ನು 5 ನಿಮಿಷ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆಯಾದರೂ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಮುಂದುವರೆದಿತ್ತು.
ಬಳಿಕ ಮತ್ತೆ ಸದನ ಪ್ರಾರಂಭ ಆಗಿ ಸದನ ಮುಕ್ತಾಯ ಆಗೋ ಒಳಗೆ ಉತ್ತರ ಕೊಡೋದಾಗಿ ಸಚಿವರು ತಿಳಿಸಿದರು. ಇದಕ್ಕೆ ಒಪ್ಪಿದ ಕಾಂಗ್ರೆಸ್ ಧರಣಿ ವಾಪಸ್ ಪಡೆಯಿತು.