ಬೆಂಗಳೂರು: ನಮಗೆ ಯಾರನ್ನೋ ಕರೆತಂದು ಟಿಕೆಟ್ ಕೊಡುವ ಉದ್ದೇಶವಿಲ್ಲ. ಪಕ್ಷ ನಿಷ್ಠೆ, ಗೆಲ್ಲುವ ಸಾಮಥ್ರ್ಯ ಇದ್ದವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನೋ ಕರೆ ತಂದು ನಾವು ಟಿಕೆಟ್ ನೀಡುವುದಿಲ್ಲ. ಪಕ್ಷ ನಿಷ್ಠರು ಹಾಗೂ ಗೆಲ್ಲುವ ಸಾಮಥ್ರ್ಯ ಇರುವವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ. ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾದ ಶರತ್ ಬಚ್ಚೇಗೌಡ ಹಾಗೂ ನಂದೀಶ್ ರೆಡ್ಡಿಯವರನ್ನು ಸಂಪರ್ಕಿಸಲು ನಾವು ಮುಂದಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ಕುರಿತು ಇಂದು ಮುಖಂಡರ ಸಭೆ ನಡೆಸುತ್ತಿದ್ದೇವೆ. ನಾಳೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ವಿವರಿಸಿದರು.
ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರ ಹದ್ದು, ಗಿಣಿ ವಾಗ್ಯುದ್ಧ ಕುರಿತು ಪ್ರತಿಕ್ರಿಯಿಸಿದ ಅವರು, ಅದೆಲ್ಲ ದೊಡ್ಡ ವಿಷಯವೇ ಅಲ್ಲ. ಇದೀಗ ಪ್ರವಾಹ ಸಂತ್ರಸ್ತರ ಬಗ್ಗೆ ಗಮನ ನೀಡಬೇಕಿದೆ. ಸರ್ಕಾರ ಯಾವುದೇ ಪರಿಹಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ಮೋದಿ ಬಳಿ ಅನುದಾನ ತರಬೇಕಿತ್ತು. ಅದನ್ನೂ ಸಿಎಂ ಯಡಿಯೂರಪ್ಪ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಉಪಚುನಾವಣೆ ಬಂದಿದೆ. ಹೀಗಾಗಿ ಕೇಂದ್ರದಿಂದ ಹಣ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಮತಕ್ಕಾಗಿ ಈಗ ಎದ್ದು ಬಿದ್ದು ಓಡಾಡುತ್ತಿದ್ದಾರೆ ಎಂದು ಸಿಎಂ ಬಿಎಸ್‍ವೈ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.