ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ನಾವು ಹೆದರುವುದಿಲ್ಲ, ಅವರು ಏನ್ ಬೇಕಾದರೂ ಮಾಡಿಕೊಳ್ಳಲಿ. ನಾವು ದೇಶದ, ಸಂವಿಧಾನದ ರಕ್ಷಣೆಗೆ ಹೋರಾಟ ಮುಂದುವರಿಸುತ್ತೇವೆ. ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿದ ಅವರು, ಇದು ಸಂಪೂರ್ಣ ಬೆದರಿಕೆಯ ಪ್ರಯತ್ನವಾಗಿದೆ. ಸ್ವಲ್ಪ ಒತ್ತಡ ಹಾಕಿದರೆ ಅವರು ನಮ್ಮನ್ನು ಮೌನಗೊಳಿಸಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ನಾವು ಸುಮ್ಮನಿರುವುದಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಈ ದೇಶದಲ್ಲಿ ಏನು ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವದ ವಿರುದ್ಧ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಬಹಿರಂಗಗೊಳಿಸುತ್ತೇವೆ ಎಂದರು.
ಓಡಿ ಹೋಗಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಓಡಿ ಹೋಗುವ ಬಗ್ಗೆ ಮಾತನಾಡುವವರು ಯಾರು? ಅವರು ಓಡಿ ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾವು ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಓಡಿ ಹೋಗುತ್ತಿರುವುದು ಬಿಜೆಪಿ ನಾಯಕರು. ಸತ್ಯಕ್ಕೆ ಅಡ್ಡಗಾಲು ಹಾಕಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಒಂದು ವರ್ಷದಲ್ಲಿ ಸಚಿವನಾಗಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ: ಆರಗ ಜ್ಞಾನೇಂದ್ರ
ಪ್ರಕರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿಚಾರಣೆ ಬಳಿಕ ದೆಹಲಿಯ ನ್ಯಾಷನಲ್ ಹೆರಾಲ್ಡ್ ಕಟ್ಟಡದಲ್ಲಿರುವ ಯಂಗ್ ಇಂಡಿಯಾ ಕಚೇರಿಯನ್ನು ಸೀಲ್ ಮಾಡಿದ್ದು ಅನುಮತಿ ಇಲ್ಲದೇ ಕಚೇರಿ ತೆರೆಯುವಂತಿಲ್ಲ ಎಂದು ಹೇಳಿದ್ದಾರೆ.
ತನಿಖೆ ಮುಂದುವರಿದಿದ್ದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎರಡನೇ ಬಾರಿ ಸಮನ್ಸ್ ನೀಡಿದ್ದು, ಇಂದು ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಡಿ ಕಾರ್ಯವೈಖರಿ ಮತ್ತು ಕೇಂದ್ರದ ಏಜೆನ್ಸಿಗಳ ವಿರುದ್ಧ ಕಾಂಗ್ರೆಸ್ ಲೋಕಸಭೆ, ರಾಜ್ಯಸಭೆಯಲ್ಲಿ ಇಂದು ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ