InternationalLatestLeading NewsMain Post

ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

ನವದೆಹಲಿ: ನೆರೆಯ ಪಾಕಿಸ್ತಾನಕ್ಕೆ (Pakistan) ಅಮೆರಿಕ (America) ನೀಡುತ್ತಿರುವ ಎಫ್-16 (F-16) ಪ್ಯಾಕೇಜ್ ಬಗ್ಗೆ ಭಾರತ ಪ್ರಶ್ನೆ ಎತ್ತಿದೆ. ಅಮೆರಿಕ ನೀಡುತ್ತಿರುವ ಪ್ಯಾಕೇಜ್‌ಗೆ ಪಾಕಿಸ್ತಾನ ಯೋಗ್ಯವಾಗಿದೆಯೇ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (Jaishankar) ಪ್ರಶ್ನಿಸಿದ್ದಾರೆ.

ಭಾನುವಾರ ವಾಷಿಂಗ್ಟನ್‌ನಲ್ಲಿ ಭಾರತ-ಅಮೆರಿಕ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜೈಶಂಕರ್, ಇದು ಪಾಕಿಸ್ತಾನಕ್ಕೆ ಉತ್ತಮ ಸೇವೆ ಸಲ್ಲಿಸುವುದರಿಂದ ಅಥವಾ ಅಮೆರಿಕದ ಹಿತಾಸಕ್ತಿಗಳಿಗೆ ಗೌರವ ನೀಡುವುದರಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ ಎಂದು ಟಾಂಗ್ ನೀಡಿದರು.

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಳವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಮೆರಿಕದಿಂದ ಎಫ್-16 ನಂತಹ ಶಕ್ತಿಶಾಲಿ ವಿಮಾನಗಳನ್ನು (Fighter Jet) ಪಡೆಯುತ್ತಿರುವ ಪಾಕಿಸ್ತಾನದ ಹಿಂದಿನ ಉದ್ದೇಶವನ್ನೂ ನಾವು ಊಹಿಸಬಲ್ಲೆವು. ನೀವು ಈ ವಿಷಯಗಳ ಬಗ್ಗೆ ಏನೇ ಸ್ಪಷ್ಟನೆ ನೀಡಿದರೂ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಜೈಶಂಕರ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಅಮೆರಿಕ 2018ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಾಯುಪಡೆಗೆ ಎಫ್-16 ಯುದ್ಧ ವಿಮಾನದ ಪ್ಯಾಕೇಜ್ ಅನ್ನು ನೀಡಲು ಒಪ್ಪಿಗೆ ನೀಡಿದೆ. ಆದರೆ ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ನೀಡಲು ಮುಂದಾಗಿರುವ ಅಮೆರಿಕವನ್ನು ಭಾರತ ಪ್ರಶ್ನಿಸಿತ್ತು. ಇದಕ್ಕೆ ಅಮೆರಿಕ ನಾವು ಪಾಕಿಸ್ತಾನಕ್ಕೆ ನೆರವು ನೀಡುತ್ತಿಲ್ಲ, ಪಾಕಿಸ್ತಾನ ನಮ್ಮಿಂದ ವಿಮಾನದ ಬಿಡಿ ಭಾಗಗಳನ್ನು ಖರೀದಿಸುತ್ತಿದೆ ಎಂದು ತಿಳಿಸಿತ್ತು.

ಭಾರತದ ವಿರೋಧ ಯಾಕೆ?
ಭಾರತ 2019 ಫೆ.26 ರಂದು ಪಾಕಿಸ್ತಾನದ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಏರ್‌ಸ್ಟ್ರೈಕ್ ಮಾಡಿದ ಮರುದಿನ ಫೆ.27 ರಂದು ಪಾಕಿಸ್ತಾನ 10 ಎಫ್ 16 ವಿಮಾನಗಳು ಭಾರತದ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ತಮ್ಮ ಮಿಗ್ 21 ವಿಮಾನದ ಮೂಲಕ ಪ್ರತಿರೋಧ ಒಡ್ಡಿದ್ದರು. ಈ ವೇಳೆ ನಡೆದ ಡಾಗ್‌ಫೈಟ್(ಆಕಾಶದಲ್ಲಿ ಯುದ್ಧ ವಿಮಾನಗಳ ಮಧ್ಯೆ ನಡೆಯುವ ಕಾದಾಟ) 1 ಎಫ್ 16 ವಿಮಾನವನ್ನು ಕ್ಷಿಪಣಿ ಪ್ರಯೋಗಿಸಿ ಉರುಳಿಸಿದ್ದರು. ಇದನ್ನೂ ಓದಿ: ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ

ಎಫ್ 16 ವಿಮಾನವನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಬಳಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಭಾರತದ ವಿರುದ್ಧ ಈ ವಿಮಾನಗಳ ಮೂಲಕ ದಾಳಿ ನಡೆಸುವ ಮೂಲಕ ಅಮೆರಿಕದ ಷರತ್ತನ್ನು ಪಾಕಿಸ್ತಾನ ಮುರಿದಿತ್ತು. ಈ ಕಾರಣಕ್ಕೆ ಭಾರತ ಈಗ ಅಮೆರಿಕ ಎಫ್ 16 ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತಿದೆ.

Live Tv

Leave a Reply

Your email address will not be published. Required fields are marked *

Back to top button