ಡೆಹ್ರಾಡೂನ್: ನಾವು ಸಂತೋಷವಾಗಿದ್ದು, ಈಗ ದೀಪಾವಳಿಯನ್ನು (Deepavali) ಆಚರಿಸುತ್ತೇವೆ ಎಂದು ಉತ್ತರಕಾಶಿ (Uttarakshi) ಸುರಂಗದಿಂದ (Tunnel) ರಕ್ಷಿಸಲ್ಪಟ್ಟ ಕಾರ್ಮಿಕರು (Workers) ಸಂತಸವನ್ನು ಹಂಚಿಕೊಂಡಿದ್ದಾರೆ.
ಸತತ 17 ದಿನಗಳ ನಿರಂತರ ಕಾರ್ಯಾಚರಣೆಯಿಂದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ (Silkyara Tunnel) ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಎನ್‌ಡಿಆರ್‌ಎಫ್ (NDRF) ತಂಡ ರಕ್ಷಣೆ ಮಾಡಿದೆ. ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಜೀತ್, ಅವಶೇಷಗಳು ಬಿದ್ದಾಗ ನಾವು ಸಿಲುಕಿಕೊಂಡಿದ್ದೇವೆ ಎಂದು ನಮಗೆ ತಿಳಿದಿತ್ತು. ಮೊದಲ 10-15 ಗಂಟೆಗಳ ಕಾಲ ನಾವು ಕಷ್ಟವನ್ನು ಎದುರಿಸಿದೆವು. ಆದರೆ ನಂತರ ಅಕ್ಕಿ, ದಾಲ್ ಮತ್ತು, ಡ್ರೈಫ್ರೂಟ್ಸ್ ಒದಗಿಸಲು ಪೈಪ್ ಹಾಕಲಾಯಿತು. ನಂತರ ಮೈಕ್ ಅನ್ನು ಸ್ಥಾಪಿಸಲಾಯಿತು. ಇದರಿಂದ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು ಎಂದರು. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ
ಮತ್ತೊಬ್ಬ ಕಾರ್ಮಿಕ ಸುಬೋಧ್ ಕುಮಾರ್ ಈ ಕುರಿತು ಮಾತನಾಡಿದ್ದು, ಎಲ್ಲಾ 41 ಜರ‍್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸಕಾರಗಳಿಗೆ ಧನ್ಯವಾದಗಳು. ಮೊದಲ 24 ಗಂಟೆಗಳು ಕಠಿಣವಾಗಿದ್ದವು. ಆದರೆ ನಂತರ ನಮಗೆ ಪೈಪ್ ಮೂಲಕ ಆಹಾರವನ್ನು ಒದಗಿಸಲಾಯಿತು. ನಾನು ಸಂಪೂರ್ಣವಾಗಿ ಉತ್ತಮನಾಗಿದ್ದೇನೆ ಮತ್ತು ಈಗ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಾನವೀಯತೆ, ಟೀಮ್‌ವರ್ಕ್‌ಗೆ ಅದ್ಭುತ ಉದಾಹರಣೆ – ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ನಮಸ್ಕರಿಸುತ್ತೇನೆ: ಮೋದಿ
ಇತ್ತ ರಕ್ಷಣಾ ಕಾರ್ಯಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಕಾರ್ಮಿಕರೊಂದಿಗೆ ಮಾತನಾಡಿರುವ ಮೋದಿ, ನೀವು ಸುರಕ್ಷಿತವಾಗಿ ಹೊರಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ, ಬದರಿನಾಥನ ಆಶೀರ್ವಾದ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಣೆ ಮಾಡುತ್ತಿದ್ದಂತೆಯೇ ಮೋದಿ ಈ ಕುರಿತು ಎಕ್ಸ್ನಲ್ಲಿ ಸಂತಸ ಹಂಚಿಕೊಂಡಿದ್ದು, ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ