ಹಾಸನ: ನನ್ನದು ಸ್ವಾತಿ ನಕ್ಷತ್ರ. ನನಗೆ ಯಾರಾದರೂ ಮಾಟ ಮಾಡಿಸಲು ಪ್ರಯತ್ನಿಸಿದರೆ ಅವರಿಗೆ ತಿರುಗುಬಾಣವಾಗುತ್ತೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆ ಸಿಗದ ಕಾರಣ ಪ್ರತಿನಿತ್ಯ ಹೊಳೆನರಸೀಪುರದಿಂದ ಬೆಂಗಳೂರಿಗೆ ಹೋಗಿ ಬರುತ್ತಿದ್ದೇನೆ. ಬಂಗಲೆ ಸಿಕ್ಕ ತಕ್ಷಣ ಅಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದು ಹೇಳಿದರು.
Advertisement
ಬಿಜೆಪಿಯಿಂದ ಅಡ್ಡಿ: ಬಜೆಟ್ ಕುರಿತು ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಎರಡು-ಮೂರು ದಿನ ಕಾಯಿರಿ. ಯಾವ ಜಿಲ್ಲೆಗೆ ಎಷ್ಟು ಅನುಕೂಲವಾಗಿದೆ ಎಂಬುದನ್ನು ಹೇಳುತ್ತೇನೆ. ರಾಜ್ಯದ ರೈತರ ಸಾಲಮನ್ನಾ ಕುರಿತು ಸಿಎಂ ಕುಮಾರಸ್ವಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೆ ಮಾತುಕತೆ ನಡೆಸಿದ್ದರು. ಮೋದಿಯವರು ಹಣ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ ರಾಜ್ಯದ ಬಿಜೆಪಿ ನಾಯಕರು ಹಣ ನೀಡದಂತೆ ಅಡ್ಡಿಪಡಿಸಿದರು ಎಂದು ಆರೋಪಿಸಿದರು. ಇದನ್ನು ಓದಿ: ಪ್ರತಿನಿತ್ಯ ಬೆಂಗಳೂರು ಟು ಹೊಳೆನರಸೀಪುರ- ಹೆಚ್‍ಡಿ ರೇವಣ್ಣ ಜರ್ನಿಯ ಹಿಂದಿದೆ ರಹಸ್ಯ!
Advertisement
ಸಮಸ್ಯೆ ಸರಿಯಾಗುತ್ತೆ: ವಿದ್ಯಾರ್ಥಿಗಳಿಗೆ ಉಂಟಾಗಿರುವ ಉಚಿತ ಬಸ್ ಪಾಸ್ ಸಮಸ್ಯೆಯನ್ನು ತಕ್ಷಣ ಸರಿಮಾಡಲಾಗುವುದು. ಸಿಎಂ ಕುಮಾರಸ್ವಾಮಿ ಅದನ್ನು ಕೂಡಲೇ ಸರಿಪಡಿಸಲಿದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಹಾಸನ ಅಭಿವೃದ್ಧಿ ಬೇಡವಾಗಿದೆ. ನನಗೆ ರಾಜಕೀಯ ಮುಖ್ಯವಲ್ಲ, ಜಿಲ್ಲೆಯ ಅಭಿವೃದ್ಧಿ ಮುಖ್ಯ. ಮಾಜಿ ಸಿಎಂ ಯಡಿಯೂರಪ್ಪನವರೇ ಬಂದು ಈ ಕುರಿತು ಸರ್ವೆ ಮಾಡಲಿ ಎಂದು ಸವಾಲು ಹಾಕಿದರು.
Advertisement
Advertisement
ಜಾತಿ ತಾರತಮ್ಯವಿಲ್ಲ: ರೈತರ ಸಾಲಮನ್ನಾ ವಿಷಯದಲ್ಲಿ ಜಾತಿ ತಾರತಮ್ಯವಿಲ್ಲ. ಸರಿಯಾದ ಮಾಹಿತಿಯಿಲ್ಲದೆ ಕೆಲವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಸಾಲಮನ್ನಾದಿಂದ ಬಡಕುಟುಂಬಗಳಿಗೆ ಅನುಕೂಲವಾಗಿದೆ. ಇದರಲ್ಲಿ ಜಾತಿ ಹೆಸರು ಸೇರ್ಪಡೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಪಕ್ಷ ಭೇದ ಮಾಡಲ್ಲ: ಹಾಸನ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಮಳೆ ಬಾರದ ಹಾಗೂ ಮಳೆ ಹೆಚ್ಚಾಗಿರುವ ಭಾಗದ ರೈತರ ಬೆಳೆ ಕುರಿತು ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಮಾ ಯೋಜನೆ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಹೇಳಿದ್ದೇನೆ. ಕಳೆದ ಹತ್ತು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರು ಅವರ ಪಕ್ಷದ ಶಾಸಕರೊಂದಿಗೆ ಬಂದು ಕಳೆದ ಹತ್ತು ವರ್ಷಗಳಿಂದ ಯಾವ ಯೋಜನೆಗಳು ಮಂಜೂರಾಗಿವೆ ಎಂಬುದನ್ನು ಪರಿಶೀಲಿಸಿ ಮಾತನಾಡಲಿ. ನಾವು ಅಭಿವೃದ್ಧಿಯಲ್ಲಿ ಪಕ್ಷ ಭೇದ ಮಾಡಲ್ಲ. ಹಾಸನದಲ್ಲಿ ಬಿಜೆಪಿ ಶಾಸಕರು ಕೂಡ ಆಯ್ಕೆಯಾಗಿದ್ದಾರೆ. ಅವರು ಬೇಡ ಅಂದರೆ ಯೋಜನೆಗಳನ್ನು ವಾಪಾಸ್ ಪಡೆಯುತ್ತೇವೆ ಎಂದರು.
ಏಕಾಂಗಿಯಾಗಿ ಪ್ರಮಾಣವಚನ: ಗ್ರಹ, ಕಾಲ ನೋಡಿಯೇ ಮುಂದುವರಿಯುವ ಎಚ್.ಡಿ.ರೇವಣ್ಣ ಅವರು ಸರ್ಕಾರ ಮತ್ತು ಜೆಡಿಎಸ್ ಮಹತ್ವದ ಕಾರ್ಯಕ್ರಮಗಳಿಗೆ ಸರಿಯಾದ ಸಮಯವನ್ನು ನಿಗದಿ ಮಾಡುತ್ತಾರೆ. ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ವೇಳೆ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಕುಳಿತುಕೊಳ್ಳಿ ಸಂಜೆ 4 ಗಂಟೆ ಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ ಎಂದು ತಿಳಿಸಿದರು. ಇದನ್ನು ಓದಿ: ವಾಸ್ತು ಪ್ರಕಾರ ಪೂಜೆ ಮಾಡ್ತಿಲ್ಲ ಅಂತಾ ಸಚಿವ ರೇವಣ್ಣರಿಂದ ಅರ್ಚಕರಿಗೆ ಕ್ಲಾಸ್
ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.