ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹದಾಯಿ ಸಂಧಾನ ಸಭೆ ಯಶಸ್ವಿಯಾಗಿದೆ ಎನ್ನುವುದರ ಬಗ್ಗೆ ಈಗ ಅನುಮಾನ ಎದ್ದಿದೆ.
ವಿವಾದದ ಬಗ್ಗೆ ಚರ್ಚಿಸಿದ್ದೇನೆ, ಭರವಸೆ ನೀಡಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮರಾಠಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರಿಂದ ಜಲ ವಿವಾದ ಅಂತ್ಯಗೊಳ್ಳುವ ಸಾಧ್ಯತೆ ಕ್ಷೀಣವಾಗಿದೆ.
Advertisement
ಮಹದಾಯಿ ಕುರಿತು ಹಿಂದಿನ ನಿಲುವಿಗೆ ಈಗಲೂ ಬದ್ಧವಾಗಿದ್ದು, ನ್ಯಾಯಾಧೀಕರಣದ ಮೂಲಕವೇ ವಿವಾದ ಇತ್ಯರ್ಥವಾಗಬೇಕು. ಈ ವಿವಾದವನ್ನು ನ್ಯಾಯಾಧೀಕರಣಕ್ಕೆ ತೆಗೆದುಕೊಂಡು ಹೋಗಿದ್ದೇ ನಾವು. ನಾವೇ ನ್ಯಾಯಾಧಿಕರಣಕ್ಕೆ ಹೋಗಿದ್ದರಿಂದ ಅಲ್ಲೇ ಇತ್ಯರ್ಥವಾಗಲಿ. ಮಹದಾಯಿ ವಿಷಯದಲ್ಲಿ ಗೋವಾ ಪ್ರಜೆಗಳು ಆತಂಕಗೊಳ್ಳಬೇಕಾಗಿಲ್ಲ ಎಂದು ಸಂದರ್ಶನದಲ್ಲಿ ಗೋವಾ ಪ್ರಜೆಗಳಿಗೆ ಪರಿಕ್ಕರ್ ಅಭಯ ನೀಡಿದ್ದಾರೆ.
Advertisement
ಪರಿಕ್ಕರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಳೇಕರ್ ಟ್ವೀಟ್ ಮಾಡಿ, ಮಹದಾಯಿ ನಮ್ಮ ತಾಯಿ, ನಾವು ನಮ್ಮ ತಾಯಿಯ ರಕ್ಷಣೆಗೆ ಬದ್ಧ. ಒಂದೊಂದು ಹನಿ ನೀರನ್ನೂ ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಗೋವಾ ಜಲಸಂಪನ್ಮೂಲ ಇಲಾಖೆ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಗೋವಾ ಅಭಿವೃದ್ಧಿಯೇ ನಮ್ಮ ಗುರಿ. ಅದಕ್ಕೆ ನಾವು ಕಟಿಬದ್ಧ ಎಂದು ಬಿಜೆಪಿ ಸರ್ಕಾರದ ಮಿತ್ರಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿ ಮುಖಂಡರೂ ಆಗಿರುವ ವಿನೋದ್ ಪಾಳೇಕರ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಮನೋಹರ್ ಪರಿಕ್ಕರ್ ಮತ್ತು ಗೋವಾ ಜಲಸಂಪನ್ಮೂಲ ಸಚಿವರ ಈ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಎಸ್ ಯಡಿಯೂರಪ್ಪ ಯಾವ ರೀತಿಯ ಹೇಳಿಕೆ ನೀಡಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಬುಧವಾರ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್, ಮುರಳೀಧರ್ ರಾವ್, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ ಭಾಗವಹಿಸಿದ್ದರು.
ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹದಾಯಿ ವಿವಾದ ಕುರಿತಂತೆ ರಾಜ್ಯ ನಾಯಕರು ಗೋವಾ ಸಿಎಂ ಮನೋಹರ್ ಪರಿಕ್ಕರ್ ಗೆ ಮನವರಿಕೆ ಮಾಡಿಕೊಟ್ಟಿದ್ದರು. ಚುನಾವಣಾ ದೃಷ್ಟಯಿಂದಲೂ ಈ ವಿವಾದ ಎಷ್ಟು ಮಹತ್ವದ್ದು ಎಂಬುದನ್ನು ಪರಿಕ್ಕರ್ ವಿವರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಾತುಕತೆ ವೇಳೆ ಅಮಿತ್ ಶಾ ಕೂಡಾ ನೀರು ನೀಡುವಂತೆ ಪರಿಕ್ಕರ್ ಗೆ ಮನವೊಲಿಸುವ ಯತ್ನ ಮಾಡಿದರು ಎನ್ನಲಾಗಿದೆ.
ಈ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಇಂದು ನಡೆದ ಸಭೆ ಬಹುತೇಕ ಫಲಪ್ರದವಾಗಿದ್ದು, ಅಮಿತ್ ಶಾ ಸಂಧಾನಕ್ಕೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದರು.