ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಮಗ, ನಟ ಸ್ನೇಹಿತ್ ಮೇಲೆ ಎರಡನೇ ಬಾರಿ ಎಫ್.ಐ.ಆರ್ (FIR) ದಾಖಲಾಗಿದೆ. ಅವರ ಮನೆ ಹತ್ತಿರದ ವ್ಯಕ್ತಿಗಳಿಂದಲೇ ಈ ರೀತಿ ಪದೇ ಪದೇ ದೂರು ದಾಖಲಾಗುತ್ತಿದೆ. ಸ್ನೇಹಿತ್ (Snehith) ಈ ಬಾರಿಯೂ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದದಿಂದ ಬೈದರು ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಮತ್ತೆ ದೂರು ದಾಖಲಾಗಿದೆ. ಈ ಕುರಿತು ಸೌಂದರ್ಯ ಜಗದೀಶ್ ಅವರು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಪದೇ ಪದೇ ನಿಮ್ಮ ಮಗನೇ ಟಾರ್ಗೆಟ್ ಆಗ್ತಿರೋದು ಯಾಕೆ?
ಅದು ನಮಗೂ ಕೂಡ ಗೊತ್ತಾಗುತ್ತಿಲ್ಲ. ಅವನು ಓದುತ್ತಿರುವ ಹುಡುಗ. ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅಂಥ ಹುಡುಗನ ಮೇಲೆ ಈ ರೀತಿ ಪದೇ ಪದೇ ದೂರು ನೀಡಿದರೆ, ಅವನ ಬಗ್ಗೆ ಸಮಾಜ ಏನನ್ನುಕೊಳ್ಳೋದು ಬೇಡ. ಟಾರ್ಗೆಟ್ ಮಾಡುತ್ತಿರುವವರ ಉದ್ದೇಶ ಏನು ಅಂತಾನೇ ಅರ್ಥ ಆಗ್ತಿಲ್ಲ. ನನ್ನ ಮಗ ಒಳ್ಳೆಯವನು. ಅವನು ಯಾರ ತಂಟೆಗೂ ಹೋಗುವುದಿಲ್ಲ.
ಸ್ನೇಹಿತ್ ಜೊತೆ ಬೌನ್ಸರ್ ಇರೋದು ಯಾಕೆ? ಅವರಿಗೆ ಜೀವ ಭಯ ಏನಾದರೂ ಇದೆಯಾ?
ಅವನ ಜೊತೆ ಯಾವ ಬೌನ್ಸರೂ ಇರೋದಿಲ್ಲ. ರಕ್ಷಿತ್ ಅಂತ ಕಾರು ಡ್ರೈವರ್ ಇರ್ತಾನೆ. ರಕ್ಷಿತ್ ಇಲ್ಲದೇ ಇರೋ ವೇಳೆಯಲ್ಲಿ ಅವನೊಬ್ಬನೇ ಕಾಲೇಜಿಗೆ ಕಾರು ತಗೆದುಕೊಂಡು ಹೋಗುತ್ತಾನೆ. ಫ್ಯಾಮಿಲಿ ಎಲ್ಲಿಗಾದರೂ ಟ್ರೀಪ್ ಗೆ ಹೋದರೆ, ಮನೆಯಲ್ಲಿ ಕೆಲಸ ಮಾಡುವವರನ್ನೂ ಕರೆದುಕೊಂಡು ಹೋಗುತ್ತೇವೆ. ಈಗ ಅವನ ಜೊತೆ ಯಾರೂ ಇರುವುದಿಲ್ಲ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್ ಯೂ ಎಂದ ಸೈಕ್ ನವಾಜ್
ಮಗನ ಮೇಲೆ ಎಫ್.ಐ.ಆರ್ ದಾಖಲೆ ಆದರೆ, ಅವರ ಭವಿಷ್ಯ ಹಾಳಾಗಲ್ವೆ?
ನಮಗೂ ಅದೇ ಯೋಚನೆ. ಓದುವ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ದೂರು ದಾಖಲಿಸುವವರೂ ಯೋಚನೆ ಮಾಡಬೇಕು. ನಾವು ಯಾವತ್ತೂ ಒಬ್ಬರ ತಂಟೆಗೆ ಹೋದವರಲ್ಲ, ನಮ್ಮ ಮಗನನ್ನೂ ಹಾಗೆಯೇ ಬೆಳೆಸಿದ್ದೇವೆ. ಅವನಾಯಿತು, ಅವನ ಓದು, ಜಿಮ್ ಆಯಿತು ಅಷ್ಟೇ ಇರುವಂತಹ ಹುಡುಗ. ಅಂಥವನ ಮೇಲೆ ನಿರಂತರ ತೊಂದರೆ ಮಾಡಲಾಗುತ್ತಿದೆ. ಹೀಗೆ ಮಾಡಿದರೆ ಕಂಡಿತಾ ಭವಿಷ್ಯ ಹಾಳಾಗತ್ತೆ.
ಒಂದು ವರ್ಷದ ಹಿಂದಿನ ಪ್ರಕರಣ ಏನಾಗಿದೆ?
ಕೇಸ್ ನಡೆತಾ ಇದೆ. ಆದರೆ, ಈ ಪ್ರಕರಣದಿಂದ ಸ್ನೇಹಿತ್ ಮತ್ತು ನನ್ನ ಪತ್ನಿಯನ್ನು ಕೈ ಬಿಡಲಾಗಿದೆ. ದೂರು ಕೊಟ್ಟವರೇ ಈ ಘಟನೆ ನಡೆದಾಗ ಸ್ನೇಹಿತ್ ಮತ್ತು ನನ್ನ ಪತ್ನಿ ಇರಲಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಬಿ ರಿಪೋರ್ಟ್ ಆಗಿದೆ.
ಮಹಿಳೆ ನಿಂದನೆ ಮಾಡುವಂತಹ ಘಟನೆ ನಡೆದದ್ದು ಹೇಗೆ? ನಿಮ್ಮ ಗಮನಕ್ಕೆ ಬಂದಿದ್ದು ಯಾವಾಗ?
ಸೆಪ್ಟೆಂಬರ್ 26 ರಂದು ನಮ್ಮ ಗಮನಕ್ಕೆ ಬಂತು. ವಿಷಯ ಕೇಳಿದ ತಕ್ಷಣವೇ ಶಾಕ್ ಆದೆ. ದೂರಿನಲ್ಲಿ ಬರೆದ ಅಂಶಗಳನ್ನು ನೋಡಿ ಅಸಹ್ಯ ಅನಿಸಿತು. ಇಷ್ಟೊಂದು ಕೆಳಮಟ್ಟಕ್ಕೆ ಅವರು ಇಳಿಯಬಾರದಿತ್ತು. ನನ್ನ ಮಗ ಯಾವತ್ತೂ ಅಂತ ಭಾಷೆಯನ್ನು ಬಳಸಲ್ಲ. ಮತ್ತು ಆ ಘಟನೆ ನಡೆದಾಗ ಅವನು ಆ ಸ್ಥಳದಲ್ಲೂ ಇರಲಿಲ್ಲ. ನನ್ನ ಮಗ ಎಲ್ಲಿದ್ದ ಅಂತ ಹೇಳೋದಕ್ಕೆ ನಮ್ಮ ಹತ್ತಿರ ವಿಡಿಯೋ ಸಾಕ್ಷಿಗಳಿವೆ.
ಸ್ನೇಹಿತ್ ಈಗ ಏನ್ ಮಾಡ್ತಿದ್ದಾರೆ?
ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ. ಅವನ ಪಾಡಿಗೆ ಅವನು ಓದಿಕೊಂಡು ಇದ್ದವನಿಗೆ ಈ ರೀತಿ ತೊಂದರೆ ಮಾಡುತ್ತಿದ್ದಾರೆ.
ಮತ್ತೆ ಸಿನಿಮಾ ರಂಗಕ್ಕೆ ಬರುವ ತಯಾರಿ ಮಾಡ್ಕೋತಿದ್ದಾರಾ?
ಓದು ಮುಗಿಯಲಿ ಅಂತ ಕಾಯುತ್ತಿದ್ದೇವೆ. ಇನ್ನೂ ಎರಡು ವರ್ಷ ಬಿಟ್ಟು ಸಿನಿಮಾ ರಂಗಕ್ಕೆ ನಾಯಕನಟನಾಗಿ ಲಾಂಚ್ ಮಾಡುವ ಉದ್ದೇಶವಿದೆ. ಓದಿನ ಜೊತೆ ಜೊತೆಗೆ ಅವನು ನಟನಾಗಲು ಏನೆಲ್ಲ ತಯಾರಿ ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾನೆ.