ಮಡಿಕೇರಿ: ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಜೀವನದಿ ಕಾವೇರಿಯಲ್ಲಿ (Cauvery River) ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಿಸುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ಒಂದು ವಾರದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿಗೆ (Drinking Water) ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೊಡಗಿನಲ್ಲಿ ಹುಟ್ಟಿ ನಾಡಿನ ಉದ್ದಗಲಕ್ಕೂ ಹರಿದು ರೈತರ ಪಾಲಿಗೆ ವರದಾನವಾಗಿರುವ ಕಾವೇರಿ ನದಿಯ ಒಡಲು ಇದೀಗ ಕೊಡಗಿನಲ್ಲಿಯೇ ಬರಿದಾಗುತ್ತಿದೆ. ವರ್ಷದ 4 ತಿಂಗಳು ತುಂಬಿ ಹರಿಯುವ ಕಾವೇರಿಯಲ್ಲಿ ಇದೀಗ ನೀರಿನ ಹರಿವಿನ ಕೊರತೆ ಎದ್ದು ಕಾಣುತ್ತಿದೆ. ಈ ಬಾರಿ ನಿರಂತರವಾಗಿ ಮಳೆ ಸುರಿದರೂ ಕಾವೇರಿ ನದಿ ಜಲಮೂಲಗಳು ಅಲ್ಲಲ್ಲಿ ಬತ್ತಿಹೋಗಿರುವ ದೃಶ್ಯ ಗೋಚರಿಸುತ್ತಿವೆ. ಕಳೆದ ಕೆಲ ದಿನಗಳಿಂದ ಮೂಲ ಕಾವೇರಿಯಿಂದ ಕುಶಾಲನಗರದವರೆಗೆ ಕೃಷಿಕರು ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಶ್ಯವಿರುವ ನೀರಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಮೋಟಾರ್ ಪಂಪ್ಗಳನ್ನು ಅಳವಡಿಸಿದ್ದಾರೆ. ಇದರಿಂದ ನದಿಯಲ್ಲಿ ನೀರಿನ ಹರಿವು ಅಲ್ಲಲ್ಲಿ ಬತ್ತಿ ಹೋಗುತ್ತಿದೆ. ನದಿ ತಟದಲ್ಲಿರುವ ಕೃಷಿಕರು ವಾಣಿಜ್ಯ ಬೆಳೆ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೆ ನೀರು ಪಂಪ್ ಮಾಡುತ್ತಿರುವುದರಿಂದ ನೀರಿನ ಕೊರತೆ ಉಂಟಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಇನ್ನೂ ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಪಟ್ಟಣಕ್ಕೆ ನಿತ್ಯ 35 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಜಲಮಂಡಳಿ ಮೂಲಕ ಕೇವಲ 28 ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ. ಒಂದೆಡೆ ಪಟ್ಟಣ ಪಂಚಾಯಿತಿಯಿಂದ ನೀರು ಸರಬರಾಜು ಮಾಡುತ್ತಿದ್ದು, ಮತ್ತೊಂದೆಡೆ ನೀರು ಪೋಲಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕೆಂದು ಎಂದು ಅಧಿಕಾರಿಗಳು ಸೂಚನೆ ನೀಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ ಕಳೆದ 5-6 ವರ್ಷಗಳಲ್ಲಿ ಪ್ರವಾಹ ಬಂದು ಭೂಕುಸಿತವಾದ ಪರಿಣಾಮದಿಂದ ಸಾಕಷ್ಟು ಹೂಳು ಕಾವೇರಿ ನದಿಯ ಒಡಲು ಸೇರಿದೆ. ಹೀಗಾಗಿ, ನೀರಿನ ಶೇಖರಣೆ ಸಾಕಷ್ಟು ಕುಂಠಿತವಾಗಿದೆ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.